ಬೆಂಗಳೂರು: ನಾನು ಬೇಕಾದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಆದರೆ ಕಾಂಗ್ರೆಸ್ ಗೆ ಹೋಗುವ ಅವಶ್ಯಕತೆ ನನಗೆ ಇಲ್ಲ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ. ವೈಯಾಲಿಕಾವಲ್ನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಾರೆಂಬ ವಿಚಾರಕ್ಕೆ ಸಂಬಂಧಿಸಿ ನಾನಂತೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಆರ್.ಆರ್. ನಗರ ಶಾಸಕ ಮುನಿರತ್ನ ತಿಳಿಸಿದ್ದಾರೆ. 17 ಜನರಲ್ಲಿ ಯಾರು ಕಾಂಗ್ರೆಸ್ಗೆ ಹೋಗುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಅಗತ್ಯ ಬಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಹೋಗುವುದಿಲ್ಲ ಎಂದರು.
ಮುನಿರತ್ನ ಭೇಟಿ ಮಾಡಿದ್ರು ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಡಿಕೆಶಿ ಮನೆಗೆ ಯಾರು ಹೋಗಿದ್ರು?, ಕಳ್ಳತನದಿಂದ ಯಾರಾದ್ರೂ ಹೋಗಿದ್ರಾ?, ಬುರ್ಕಾ ಹಾಕಿಕೊಂಡು ಹೋಗಿದ್ರಾ? ಇದನ್ನ ಹೇಳಲಿ. ಕ್ಷೇತ್ರದ ವಿಚಾರ ಬಗ್ಗೆ ಮಾತಾಡಿದ್ದನ್ನು ರಾಜಕೀಯವಾಗಿ ಡಿಕೆಶಿ ಬಳಸಿಕೊಳ್ಳೋದು ಬೇಡ ಎಂದು ತಿಳಿಸಿದರು
ವೈಯಕ್ತಿಕವಾಗಿ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಜೊತೆ ಯಾವುದೇ ದ್ವೇಷ ಇಲ್ಲ. ಅಧಿಕಾರಕ್ಕೋಸ್ಕರ ನಾನು ಪಕ್ಷ ಬಿಟ್ಟು ಹೋಗಲ್ಲ. ನಾನು ವಿಪಕ್ಷದಲ್ಲಿಯೇ ಇರುತ್ತೇನೆ. ಬಿಜೆಪಿಯಲ್ಲಿ ಬಹಳ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದಾರೆ. ನಳೀನ್ ಕುಮಾರ್ ಕಟೀಲ್ ಗೌರವದಿಂದ ಮಾತಾಡಿಸುತ್ತಾರೆ. ಎಂದೂ ಏಕವಚನದಿಂದ ಮಾತಾಡಿಸಿಲ್ಲ ಎಂದು ಹೇಳಿದರು.