ಒಟ್ಟೋವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಹಿಂದೂ ದೇವಾಲಯವನ್ನು ಮಧ್ಯರಾತ್ರಿ ಧ್ವಂಸಗೊಳಿಸಲಾಗಿದೆ. ಅಲ್ಲದೇ ಹತ್ಯೆಯಾಗಿರುವ ಖಲಿಸ್ತಾನಿ ಭಯೋತ್ಪಾದಕರ ಪೋಸ್ಟರ್ಗಳನ್ನು ದೇವಾಲಯದ ಮುಖ್ಯ ಬಾಗಿಲಿಗೆ ಅಂಟಿಸಿರುವ ಘಟನೆ ನಡೆದಿದೆ.
ಜೂನ್ 18 ರ ಹತ್ಯೆಯಲ್ಲಿ ಭಾರತದ ಪಾತ್ರವನ್ನು ಕೆನಡಾ ತನಿಖೆ ಮಾಡುತ್ತದೆ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ಬಾಗಿಲಿಗೆ ಅಂಟಿಸಲಾಗಿದ್ದ ಪೋಸ್ಟರ್ನಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಫೋಟೋ ಕೂಡ ಇತ್ತು.
ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರ ಸಾಹಿಬ್ನ ಮುಖ್ಯಸ್ಥನಾಗಿದ್ದ. ಜೂನ್ 18 ರಂದು ಸಂಜೆ ಗುರುದ್ವಾರದ ಆವರಣದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಆತನನ್ನು ಕೊಂದಿದ್ದರು. ಧ್ವಂಸಗೊಳಿಸಲಾದ ದೇವಾಲಯವು ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರ. ಬ್ರಿಟಿಷ್ ಕೊಲಂಬಿಯಾದಲ್ಲಿನ ಅತಿದೊಡ್ಡ ಮತ್ತು ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಕೆನಡಾದಲ್ಲಿ ಈ ವರ್ಷ ನಡೆದ ಮೂರನೇ ದೇವಸ್ಥಾನ ಧ್ವಂಸ ಘಟನೆ ಇದಾಗಿದೆ.
ಜನವರಿ 31 ರಂದು, ಕೆನಡಾದ ಬ್ರಾಂಪ್ಟನ್ನಲ್ಲಿರುವ ಪ್ರಮುಖ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದೊಂದಿಗೆ ಧ್ವಂಸಗೊಳಿಸಲಾಗಿತ್ತು. ಈ ಕೃತ್ಯ ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವರ್ಷದ ಏಪ್ರಿಲ್ನಲ್ಲಿ ಕೆನಡಾದ ಒಂಟಾರಿಯೊದಲ್ಲಿರುವ ಮತ್ತೊಂದು ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದಿಂದ ಧ್ವಂಸಗೊಳಿಸಲಾಗಿತ್ತು. ವಿಂಡ್ಸರ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಇಬ್ಬರು ಶಂಕಿತರು ಹಿಂದೂ ದೇವಾಲಯದ ಗೋಡೆಗಳ ಮೇಲೆ ಪೇಂಟಿಂಗ್ ಎರಚಿದ್ದಾರೆ.