ಬೆಂಗಳೂರು: ನಟ ಉಪೇಂದ್ರರ ಪದ ಬಳಕೆಗೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಆಕ್ರೋಶ ಹೊರ ಹಾಕಿದ್ದಾರೆ. ಉಪೇಂದ್ರ ಅವರು ಒಬ್ಬ ಖ್ಯಾತ ನಟ, ನಿರ್ಮಾಪಕ ಮತ್ತು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೂಲಕ ಸಾರ್ವಜನಿಕ ಜೀವನದಲ್ಲಿ ಇರಲು ಬಯಸುತ್ತಿರುವ ವ್ಯಕ್ತಿ. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಜಾತಿ ಹೆಸರನ್ನು ಕರೆಯುತ್ತಿರುವುದನ್ನು ನೋಡಿದರೆ ಇದು ಸಮುದಾಯಕ್ಕೆ ಮಾತ್ರವಲ್ಲದೇ ಸಂವಿಧಾನಕ್ಕೂ ಮಾಡಿದ ಅಪಚಾರ ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸ್ಯಾಂಡಲ್ವುಡ್ ನಟ ಉಪೇಂದ್ರ ಅವರ ಮೇಲೆ ಎಫ್ಐಆರ್ ದಾಖಲಾಗಿದೆ. ಸಮುದಾಯವೊಂದನ್ನು ನಿಂದಿಸಿದ ಆರೋಪದ ಮೇಲೆ ಉಪೇಂದ್ರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಅವರು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಉಪೇಂದ್ರ ಮೇಲೆ ಪ್ರಕರಣ ದಾಖಲಾಗಿದ್ದು, ಎಸಿಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಯುತ್ತಿದೆ. ಸಮುದಾಯವೊಂದನ್ನು ನಿಂದಿಸಿದ ಆರೋಪವನ್ನ ಉಪೇಂದ್ರ ಅವರು ಎದುರಿಸುತ್ತಿದ್ದಾರೆ. ಉಪೇಂದ್ರ ವಿರುದ್ಧ ಕಾನೂನು ಹೋರಾಟಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮುಂದಾಗಿದ್ದಾರೆ.