ಇನ್ಮುಂದೆ ಗುಂಪು ಹತ್ಯೆಗೆ ಗಲ್ಲು ಶಿಕ್ಷೆ: ಅಮಿತ್ ಶಾ ಘೋಷಣೆ

ನವದೆಹಲಿ: ಕ್ರಿಮಿನಲ್ ಕಾನೂನುಗಳನ್ನು ಪರಿಷ್ಕರಿಸುವ ಮೂರು ಮಸೂದೆಗಳನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಅವರು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ದೇಶದ ಕ್ರಿಮಿನಲ್ ಕಾನೂನುಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಹೊಸ ಮಸೂದೆಯನ್ನು ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದರು. ಹೊಸ ಮಸೂದೆಗಳೊಂದಿಗೆ ಸರ್ಕಾರವು ನ್ಯಾಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆಯೇ ಹೊರತು, ಶಿಕ್ಷೆಯನ್ನಲ್ಲ ಎಂದು ಮಸೂದೆ ಮಂಡನೆ ವೇಳೆ ಅಮಿತ್‌ ಶಾ ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಗುಂಪು ಹಿಂಸಾಚಾರಕ್ಕೆ ಮರಣದಂಡನೆ ಶಿಕ್ಷೆ ವಿಧಿಸುವುದನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೇ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC) ಮತ್ತು ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಿಸುವ ಮಸೂದೆಯನ್ನು ಅಮಿತ್‌ ಶಾ ಮಂಡಿಸಿದ್ದಾರೆ.

ವಿವಾದಾತ್ಮಕ ದೇಶದ್ರೋಹ ಕಾನೂನನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿಬಂಧನೆಯನ್ನು ಮಸೂದೆ ಹೊಂದಿದೆ. ಮಸೂದೆಯು IPCಯನ್ನು ಬದಲಿಸುವ ಗುರಿಯನ್ನು ಹೊಂದಿದೆ ಎಂದು ಅಮಿತ್‌ ಶಾ ಸಂಸತ್‌ನಲ್ಲಿ ಹೇಳಿದ್ದಾರೆ. ಅಪರಾಧದ ತೀವ್ರತೆಗೆ ಅನುಗುಣವಾಗಿ ಗುಂಪು ಹತ್ಯೆ ಪ್ರಕರಣಗಳಲ್ಲಿ ಮರಣದಂಡನೆ, ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಲಂಚ ನೀಡಿದರೆ ಒಂದು ವರ್ಷ ಜೈಲು ಶಿಕ್ಷೆ, ಸಾಮೂಹಿಕ ಅತ್ಯಾಚಾರಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ,

ಅಪ್ರಾಪ್ತೆಯರ ಅತ್ಯಾಚಾರಕ್ಕೆ ಮರಣದಂಡನೆ ಅಂಶಗಳನ್ನು ಮಸೂದೆ ಒಳಗೊಂಡಿದೆ.1860 ರ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತಾದಿಂದ ಬದಲಾಯಿಸಲಾಗುವುದು. ಮೊದಲು 511 ವಿಭಾಗಗಳಿದ್ದವು, ಆದರೆ ಈಗ ಅದು 356 ವಿಭಾಗಗಳನ್ನು ಹೊಂದಿರುತ್ತದೆ. 175 ಪರಿಚ್ಛೇದಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

 

Loading

Leave a Reply

Your email address will not be published. Required fields are marked *