ಗಯಾನಾ: ಸೂರ್ಯಕುಮಾರ್ ಯಾದವ್ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಹಾಗೂ ಕುಲ್ ದೀಪ್ ಯಾದವ್ ಸ್ಪಿನ್ ಬೌಲಿಂಗ್ ದಾಳಿ ನೆರವಿನಿಂದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 1-2 ಅಂತರದಲ್ಲಿ ಕಾಯ್ದುಕೊಂಡಿದ್ದು ಸರಣಿ ಜಯದ ಕನಸು ಜೀವಂತವಾಗಿಸಿಕೊಂಡಿದೆ.
ವಿಂಡೀಸ್ ನೀಡಿದ 159 ರನ್ಗಳ ಗುರಿ ಬೆನ್ನತ್ತಿದ್ದ ಭಾರತ 17.5 ಓವರ್ಗಳಲ್ಲೇ 3 ವಿಕೆಟ್ ನಷ್ಟಕ್ಕೆ 164 ರನ್ ಚಚ್ಚಿ ಗೆಲುವು ಸಾಧಿಸಿತು. ಸ್ಫೋಟಕ ಆರಂಭ ಪಡೆದ ಟೀಂ ಇಂಡಿಯಾ ಪವರ್ ಪ್ಲೇನಲ್ಲೇ ಭರ್ಜರಿ ಬ್ಯಾಟಿಂಗ್ನೊಂದಿಗೆ 6 ಓವರ್ಗಳಲ್ಲಿ 60 ರನ್ ಬಾರಿಸಿತ್ತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ಕಳಪೆ ಪ್ರದರ್ಶನ ನೀಡಿ ಕೈಚೆಲ್ಲಿದರೂ, 3ನೇ ವಿಕೆಟ್ಗೆ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಜೋಡಿ ವಿಂಡೀಸ್ ಬೌಲರ್ಗಳನ್ನ ಹಿಗ್ಗಾಮುಗ್ಗ ಚೆಂಡಾಡಿತು. 51 ಎಸೆತಗಳಲ್ಲಿ ಈ ಜೋಡಿ 87 ರನ್ ಬಾರಿಸಿತ್ತು.
188.63 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಯಾದವ್ ಸೂರ್ಯಕುಮಾರ್ ಯಾದವ್ 44 ಎಸೆತಗಳಲ್ಲಿ 83 ರನ್ (4 ಸಿಕ್ಸರ್, 10 ಬೌಂಡರಿ) ಚಚ್ಚಿ ಔಟಾದರು. ನಂತರ ತಿಲಕ್ ವರ್ಮಾ 49 ರನ್ (37 ಎಸೆತ, 1 ಸಿಕ್ಸರ್, 4 ಬೌಂಡರಿ) ಬಾರಿಸಿದರೆ, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 20 ರನ್ ಬಾರಿಸಿ ಅಜೇಯರಾಗುಳಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕ ಜೋಡಿ ಮೊದಲ ವಿಕೆಟ್ಗೆ 7.4 ಓವರ್ಗಳಲ್ಲಿ 55 ರನ್ ಕಲೆ ಹಾಕಿತು. ಬ್ರೆಂಡನ್ ಕಿಂಗ್ 42 ರನ್ ಗಳಿಸಿದ್ರೆ, ಕೇಲ್ ಮೇಯರ್ಸ್ 25 ರನ್ ಗಳಿಸಿ ಔಟಾದರು. ಈ ಬೆನ್ನಲ್ಲೇ ಜಾನ್ಸನ್ ಜಾರ್ಲ್ಸ್ 12 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು