ಬೆಂಗಳೂರು ;- ನಗರದ ಬೋಗನಹಳ್ಳಿಯಲ್ಲಿ ಉಬರ್ ಟ್ಯಾಕ್ಸಿ ಚಾಲಕನೊಬ್ಬ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಜರುಗಿದೆ.
ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ಮಹಿಳೆ ಕ್ಯಾಬ್ ಬುಕ್ ಮಾಡಿದ್ದರು. ಮಹಿಳೆ ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿತ್ತು.
ಇದರ ಅರಿವಿಲ್ಲದೇ ಮಹಿಳೆ ಮತ್ತು ಮಗ ಕ್ಯಾಬ್ ಹತ್ತಿ ಕುಳಿತಿದ್ದರು. ಬಳಿಕ ಇದು ಬೇರೆ ಕ್ಯಾಬ್ ಎಂದು ಅರಿತು ಕ್ಯಾಬ್ ಇಳಿಯಲು ಯತ್ನಿಸಿದ್ದರು. ಈ ವೇಳೆ ಚಾಲಕ ಕಾರು ಚಲಾಯಿಸಲು ಮುಂದಾಗಿದ್ದ. ಮಹಿಳೆ ಆಕ್ಷೇಪಿಸಿದಾಗ, ದಿಢೀರನೆ ಕ್ಯಾಬ್ ನಿಲ್ಲಿಸಿ ಇಳಿದು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಏಕಾಏಕಿ ಮಹಿಳೆ ತಲೆಗೆ ಹೊಡೆಯಲು ಮುಂದಾಗಿದ್ದಾನೆ ಎಂದು ದೂರಲಾಗಿದೆ.
ಕ್ಯಾಬ್ ಚಾಲಕ ಬಸವರಾಜ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಹೇಳಿಕೆ ಹೀಗಿದೆ: ಅದೇ ಅಪಾರ್ಟ್ಮೆಂಟಿನಲ್ಲಿ ಎರಡು ಕ್ಯಾಬ್ ಬುಕ್ ಆಗಿದ್ದವು. ಮಹಿಳೆ ಬುಕ್ ಮಾಡಿದ್ದು ಬೇರೆಯ ಕ್ಯಾಬ್. ಆದರೆ ಅದೇ ಸಮಯಕ್ಕೆ ಬಂದ ಬಸವರಾಜ್ ಕ್ಯಾಬ್ ಅನ್ನು ಆಕೆ ಹತ್ತಿದ್ದಾರೆ. 100 ಮೀಟರ್ ದೂರದಲ್ಲಿ ಇದು ಗೊತ್ತಾಗಿ ಕ್ಯಾಬ್ ನಿಲ್ಲಿಸುವಂತೆ ಚಾಲಕನಿಗೆ ದಬಾಯಿಸಿದ್ದಾರೆ. ಏಕವಚನದಲ್ಲೇ ಕ್ಯಾಬ್ ಡ್ರೈವರ್ ಅನ್ನು ನಿಂದಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಮಾತಿನ ಚಕಮಕಿ ನಡೆದಿದ್ದು, ನಂತರ ಮಹಿಳೆ ಕೆಳಗಿಳಿದು ಡೋರ್ ಜೋರಾಗಿ ಹಾಕಿದ್ದಾರೆ. ತನ್ನ ತಾಯಿಯಂತೆ ಕ್ಯಾಬ್ ಅನ್ನು ನೋಡಿಕೊಳ್ಳುತ್ತಿದ್ದ ಚಾಲಕ ಇದರಿಂದ ಕೋಪಗೊಂಡು ಮಹಿಳೆಯನ್ನು ನೂಕಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ದೃಶ್ಯ ಅಪಾರ್ಟ್ಮೆಂಟ್ ಸಿಸಿಟಿವಿಯಲ್ಲಿ ಸೆರೆಯಾಗಿದೆ,