ಭೋಪಾಲ್: ಭಾರತವನ್ನು ಹೊಗಳುವ ಎಲ್ಲರನ್ನೂ ಸಹೋದರರಂತೆ ಕಾಣುತ್ತೇವೆ. ಆದರೆ ರಾಷ್ಟ್ರದ ವಿರುದ್ಧ ಮಾತನಾಡುವವರ ಪ್ರಾಣ ತೆಗೆಯಲು ಹಿಂದೆ ಸರಿಯುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯವರ್ಗಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಂಗ್ರೋಟ್ನಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಯಾರ ವಿರೋಧಿಗಳಲ್ಲ, ಭಾರತ್ ಮಾತಾ ಕೀ ಜೈ ಎಂದು ಹೇಳುವವರೆಲ್ಲರೂ ನಮ್ಮ ಸಹೋದರರು ಮತ್ತು ಅವರಿಗಾಗಿ ನಾವು ನಮ್ಮ ಪ್ರಾಣವನ್ನು ಕೊಡುತ್ತೇವೆ. ಆದರೆ ಭಾರತ ಮಾತೆಯ ವಿರುದ್ಧ ಮಾತನಾಡಿದರೆ ಅವರ ಪ್ರಾಣ ತೆಗೆಯಲು ನಾವು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಯಾವಾಗ ಬರಲಿದೆ ಎಂಬ ಪ್ರಶ್ನೆಗಳನ್ನು ಕೇಳಿ ಬಿಜೆಪಿಯನ್ನು ವ್ಯಂಗ್ಯವಾಡುತ್ತಿತ್ತು. ಭಗವಾನ್ ರಾಮ ಕಾಲ್ಪನಿಕ ವ್ಯಕ್ತಿ ಎಂದು ವಾದಿಸುವವರೆಲ್ಲರೂ ತಮ್ಮ ಪಾಪವನ್ನು ತೊಳೆಯಲು ಜನವರಿಯಲ್ಲಿ ಅಯೋಧ್ಯೆಗೆ ಹೋಗಬೇಕು ಎಂದು ತಿರುಗೇಟು ನೀಡಿದರು.
ಕಾಶ್ಮೀರದಲ್ಲಿ ಶಾಂತಿ ನೆಲೆಸಿದ ವಿಚಾರವನ್ನು ಪ್ರಸ್ತಾಪಿಸಿದ ವಿಜಯವರ್ಗಿಯಾ, ಈ ಹಿಂದೆ ಪ್ರಕ್ಷುಬ್ಧ ಪ್ರದೇಶದಲ್ಲಿ ಇದ್ದ ಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಈಗ ಅಲ್ಲಿನ ಪ್ರತಿಯೊಂದು ಮನೆಯ ಮೇಲೂ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು.