ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭದಿಂದಲೂ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವಿರುದ್ದ ಮಾಡುವುದನ್ನು ಮುಂದುವರೆಸಿದ್ದು, ಅವರ ಮಾತುಗಳು ಸಂಪೂರ್ಣ ಸುಳ್ಳಿನ ಕಂತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರ್ಥಿಕತೆ ಹಾಳು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಸಂಪೂರ್ಣ ಹದಗೆಟ್ಟಿತ್ತು. ಬೆಲೆ ಏರಿಕೆಯಾಗಿ ಡಬಲ್ ಅಂಕಿ ಬೆಲೆ ಏರಿಕೆ, ಸಿಂಗಲ್ ಅಂಕಿ ಆರ್ಥಿಕ ಬೆಳವಣಿಗೆಯಾಗಿತ್ತು. ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಆರೋಪ ಯುಪಿಎ ಸರ್ಕಾರದ ಮೇಲೆ ಇತ್ತು. ಆಕಾಶ, ಭೂಮಿ ನೀರಿನಲ್ಲಿ ಹಗರಣ ಇತ್ತು. ಎಲ್ಲೆಡೆ ಹಗರಣಗಳ ಸುರಿಮಳೆ ಇತ್ತು.
ಪ್ರಧಾನಿ ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಆರ್ಥಿಕತೆ ಸಧೃತೆ ತಂದಿದ್ದಾರೆ. ಮೋದಿಯವರ ಕಾಲದಲ್ಲಿ ಅತಿ ಹೆಚ್ಚು ವಿದೇಶಿ ವಿನಿಮಯ ನಿಧಿ ಇದೆ. 573 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಫಂಡ್ ಇದೆ. 543 ಬಿಲಿಯನ್ ಡಾಲರ್ ಗೋಲ್ಡ್ ನಿಧಿ ಇದೆ. ಇಡೀ ವಿಶ್ವದಲ್ಲೇ ಅತಿ ಹೆಚ್ಚು ವಿದೇಶಿ ವಿನಿಮಯ ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಬಂಡವಾಳ ಭಾರತಕ್ಕೆ ಹರಿದು ಬರುತ್ತಿದೆ. ಇದು ಭಾರತದ ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.