ಬೆಳಗಾವಿ: ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆ ಹೆಸರು ಕೆಡಿಸುವ ಹುನ್ನಾರ ನಡೆದಿದೆ ಎಂದು ಹಲಗಾ-ಬಸ್ತವಾಡ ಆಶ್ರಮದ ಬಾಲಾಚಾರ್ಯ ಸಿದ್ದಸೇನ ಮುನಿ ಮಹಾರಾಜ ಆರೋಪಿಸಿದ್ದಾರೆ. ತಾಲೂಕಿನ ಹಲಗಾ-ಬಸ್ತವಾಡ ಗ್ರಾಮದ ಆಶ್ರಮದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು,
ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ಮೃತ ವಿದ್ಯಾರ್ಥಿನಿ ಸೌಜನ್ಯ ನಮ್ಮ ತಂಗಿ, ತಾಯಿಯ ಸಮಾನ. ಆಕೆಯ ಹತ್ಯೆಯಾಗಿ 10 ವರ್ಷಗಳೇ ಕಳೆದಿವೆ. ಆದರೂ ಆಕೆಯ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಪ್ರಕರಣದ ತನಿಖಾಧಿಕಾರಿಗಳು ನಿಜವಾದ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು. ಈ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರನ್ನು ಎಳೆದು ತರಲಾಗುತ್ತಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೆಸರನ್ನು ಕೆಡಿಸುವ ಯತ್ನ ನಡೆದಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ದೇಶದ ಎಲ್ಲ ಭಾಗಗಳ ಎಲ್ಲ ಧರ್ಮದ ಭಕ್ತರು ಬರುತ್ತಾರೆ. ಜಾತಿ-ಧರ್ಮ ಮೀರಿದ ದೇಶದ ಪ್ರಮುಖ ಶ್ರದ್ಧಾ ಕೇಂದ್ರ ಧರ್ಮಸ್ಥಳ. ಆದರೆ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಪ್ಪು ಚುಕ್ಕಿ ತರುವ ಕೆಲಸ ಯಾರೂ ಮಾಡಬಾರದು.
ಕಾನೂನು ಪ್ರಕಾರ, ನಿಜವಾದ ಆರೋಪಿಗೆ ಶಿಕ್ಷೆ ಆಗಬೇಕೆಂದು ವೀರೇಂದ್ರ ಹೆಗ್ಗಡೆ ಕೂಡ ಹೇಳಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ಗೆ ಹೋಗಿ ಆದರೂ ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಬಾಲಾಚಾರ್ಯ ಸಿದ್ದಸೇನ ಮುನಿ ಮಹಾರಾಜ ಆಗ್ರಹಿಸಿದ್ದಾರೆ. ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಕಾಮಕುಮಾರ ಹತ್ಯೆ ಪ್ರಕರಣಕ್ಕೆ ವಿಚಾರಕ್ಕೆ ಮುನಿಗಳ ಹತ್ಯೆ ಪ್ರಕರಣ ಸಂಬಂಧ ದೇಶಾದ್ಯಂತ ಹೋರಾಟಗಳು ನಡೆದಿವೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ನೀಡಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುವ ವಿಶ್ವಾಸ ಇದೆ ಎಂದರು.