ಮಂಗಳೂರು: ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳಿಗೆ ಭಕ್ತರು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾಗಬೇಡಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ವಿನಂತಿಸಿಕೊಂಡಿದ್ದಾರೆ. ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಅವರು ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬದ ವಿರುದ್ಧ ಆರೋಪದ ಹಿನ್ನೆಲೆ ಬೇಸರ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ನಡೆದ ಸೌಜನ್ಯ ಹತ್ಯೆಗೆ ನ್ಯಾಯ ದೊರಕಿಸಿಕೊಡಲು ನಮ್ಮ ಕುಟುಂಬ ಒತ್ತಾಯಿಸಿತ್ತು. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದೇವೆ. ಸಿಐಡಿ ಬಳಿಕ ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ತನಿಖೆ ನಡೆಸಿತ್ತು. ಇದೀಗ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ಉಲ್ಲೇಖಿಸಿದ್ದಾರೆ. ಇದೀಗ ಮತ್ತೆ ಕ್ಷೇತ್ರ ಹಾಗೂ ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ.
ಈ ಪ್ರಕರಣ ಸರ್ಕಾರ ಹಾಗೂ ತನಿಖಾ ಸಂಸ್ಥೆಯ ವ್ಯಾಪ್ತಿಯಲ್ಲಿದೆ. ಹೀಗಾಗಿ ಸರ್ಕಾರ ಹಾಗೂ ತನಿಖಾ ಸಂಸ್ಥೆ ಸೂಕ್ತ ನ್ಯಾಯ ಕೊಡಲು ಒತ್ತಾಯಿಸುತ್ತೇನೆ. ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳಿಗೆ ಭಕ್ತರು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾಗಬೇಡಿ ಎಂದು ಧರ್ಮಾಧಿಕಾರಿಯವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.