ಲಂಡನ್: ಆಸ್ಟ್ರೇಲಿಯಾ ವಿರುದ್ಧ ದಿ ಓವಲ್ ಮೈದಾನದಲ್ಲಿ ನಡೆದ ಪ್ರತಿಷ್ಠಿತ ಆಷಸ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ 76 ನೀಡಿ 3 ವಿಕೆಟ್ ಪಡೆದು ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟಾರ್ ಆಲ್ ರೌಂಡರ್ ಮೊಯೀನ್ ಅಲಿ, ಟೆಸ್ಟ್ ವೃತ್ತಿ ಜೀವನಕ್ಕೆ ದೃಢನಿರ್ಧಾರದಿಂದ ನಿವೃತ್ತಿ ಘೋಷಿಸಿದ್ದಾರೆ.
ಅಲಿ ಅವರ ಉಪಯುಕ್ತ ಪ್ರದರ್ಶನದಿಂದ ಕೊನೆಯ ಪಂದ್ಯ ಗೆದ್ದ ಇಂಗ್ಲೆಂಡ್ ಸರಣಿಯಲ್ಲಿ 2-2 ಸಮಬಲಗೊಳಿಸಿ ತವರಿನ ದಶಕದ ದಾಖಲೆಯನ್ನು ಜೀವಂತವಾಗಿರಿಸಿದ್ದರೆ, ಮೊಯಿನ್ ಅಲಿ ಗೆಲುವಿನ ವಿದಾಯ ಹೇಳಿದ್ದಾರೆ.
2021ರಲ್ಲೇ ಟೆಸ್ಟ್ ಜೀವನಕ್ಕೆ ಮೊಯೀನ್ ಅಲಿ ವಿದಾಯ ಹೇಳಿದ್ದರು. ಆದರೆ ಎಡಗೈ ಸ್ಪಿನ್ನರ್ ಜಾಕ್ ಲೀಚ್ ಗಾಯಗೊಂಡಿದ್ದರಿಂದ ಹೆಡ್ ಕೋಚ್ ಬ್ರೆಂಡನ್ ಮೆಕಲಮ್ ಹಾಗೂ ನಾಯಕ ಬೆನ್ ಸ್ಟೋಕ್ಸ್ ಅವರ ಒತ್ತಾಯ ಪೂರ್ವಕ ಮನವಿಗೆ ಮಣಿದ ಮೊಯಿನ್ ಅಲಿ, ಇಂಗ್ಲೆಂಡ್ ತಂಡದ ಪರ ಆಷಸ್ ಟೆಸ್ಟ್ ಸರಣಿ ಆಡಿದ್ದಲ್ಲದೆ, ತಮ್ಮ ಅತ್ಯಮೋಘ ಪ್ರದರ್ಶನದಿಂದ ಸರಣಿಯನ್ನು 2-2 ರಿಂದ ಸಮಬಲಗೊಳಿಸಲು ಸಹಕರಿಸಿದ್ದಾರೆ.
ಬಿಸಿಸಿ ಜತೆ ಮಾತನಾಡಿರುವ ಇಂಗ್ಲೆಂಡ್ ಸ್ಟಾರ್ ಆಲ್ ರೌಂಡರ್ ಮೊಯೀನ್ ಅಲಿ,” ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ರಿಂದ ಮತ್ತೊಮ್ಮೆ ಸಂದೇಶ ಬಂದರೆ ಅದನ್ನು ಅಳಿಸಿ ಹಾಕುತ್ತೇನೆ,” ಎಂದು ಅಲಿ ಹೇಳಿದ್ದಾರೆ.
“ಟೆಸ್ಟ್ ನಿವೃತ್ತಿ ಜೀವನದಿಂದ ಹಿಂದಿರುಗಿದ್ದು ನಿಜಕ್ಕೂ ಒಳ್ಳೆಯ ಅನುಭವವನ್ನೇ ನೀಡಿದೆ. ಏಕೆಂದರೆ ನನ್ನ ಟೆಸ್ಟ್ ವೃತ್ತಿ ಜೀವನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ತೋರಿರಲಿಲ್ಲ, ಆ ತಂಡದ ವಿರುದ್ಧ ಅದ್ಭುತ ಪ್ರದರ್ಶನ ತೋರುವ ಉದ್ದೇಶದಿಂದಲೇ ನಾನು ನಿವೃತ್ತಿ ನಿರ್ಧಾರದಿಂದ ಹಿಂದೆ ಬಂದಿದ್ದೆ. ಸ್ಟೋಕಿ ಈ ಕುರಿತು ಕೇಳಿದಾಗ, ಒಂದು ಅತ್ಯುತ್ತಮ ತಂಡದ ಜತೆ ಏಕೆ ಕಾಣಿಸಿಕೊಳ್ಳಬಾರದು, ಅಲ್ಲದೆ ನನ್ನಲ್ಲಿ ಇನ್ನೂ ಉತ್ತಮ ಕ್ರಿಕೆಟ್ ಉಳಿದಿದೆ ಎಂಬ ಭಾವನೆ ಇತ್ತು. ಅದೇ ರೀತಿ ಉತ್ಕೃಷ್ಟ ತಂಡಕ್ಕೆ ಮರಳಿದ ಅನುಭವ ಸೊಗಸಾಗಿದೆ,” ಎಂದು ಮೊಯೀನ್ ಅಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಆಗಿರುವ ಮೊಯೀನ್ ಅಲಿ ಆಡಿದ್ದ 68 ಟೆಸ್ಟ್ ಪಂದ್ಯದಲ್ಲಿ 5 ಶತಕ,15 ಅರ್ಧಶತಕ ನೆರವಿನಿಂದ 3094 ರನ್ ಗಳಿಸಿದ್ದಲ್ಲದೆ, 155* ಗರಿಷ್ಠ ಸ್ಕೋರ್ ಆಗಿದೆ. 205 ವಿಕೆಟ್ ಕಬಳಿಸಿರುವ ಅಲಿ, 1 ಪಂದ್ಯದಲ್ಲಿ 10 ವಿಕೆಟ್, 5 ಪಂದ್ಯಗಳಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಆಡಿದ ಅಂತಿಮ ಪಂದ್ಯದಲ್ಲಿ ತಂಡಕ್ಕೆ 49 ರನ್ ಜಯ ತಂದುಕೊಟ್ಟು 2-2 ರಿಂದ ಸರಣಿ ಸಮಬಲಕ್ಕೆ ತಂಡಕ್ಕೆ ಬಲ ತಂದಿದ್ದ ಮೊಯೀನ್ ಅಲಿ, ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ರೊಂದಿಗೆ ಟೆಸ್ಟ್ ಜೀವನಕ್ಕೆ ಗೆಲುವಿನ ವಿದಾಯ ಹೇಳಿದ್ದಾರೆ.