ಗುಲ್ಟು, ಹೊಂದಿಸಿ ಬರೆಯಿರಿ, ಹೊಯ್ಸಳ ಚಿತ್ರಗಳ ಮೂಲಕ ಜನಮನ್ನಣೆ ಪಡೆದಿರುವ ನವೀನ್ ಶಂಕರ್ ಅಭಿನಯದ ‘ಕ್ಷೇತ್ರಪತಿ’ ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ. ಬಸವ ಪಾತ್ರದಲ್ಲಿ ನವೀನ್ ಶಂಕರ್ ಕಾಣಿಸಿಕೊಳ್ಳುತ್ತಿದ್ದು, ಭೂಮಿಕಾ ಎಂಬ ಹೆಸರಿನಿಂದ ಹೊಸ ತಲೆಮಾರಿನ ಪತ್ರಕರ್ತೆ ಪಾತ್ರದಲ್ಲಿ ಅರ್ಚನಾ ಜೋಯಿಸ್ ಅಭಿನಯಿಸಿದ್ದಾರೆ.
ರೈತರ ಹೋರಾಟಕ್ಕೆ ಮಹಿಳಾ ಆಯಾಮ ಅರ್ಚನಾ ಜೋಯಿಸ್ ಪಾತ್ರ ನೀಡುತ್ತದೆ. ಈ ಹಿಂದೆ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಮೋಡಿ ಮಾಡಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಜೋಡಿ ಕ್ಷೇತ್ರಪತಿ ಚಿತ್ರದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸಲಿದೆ. ಈಗಾಗಲೇ ಕ್ಷೇತ್ರಪತಿ ಚಿತ್ರದ ಟೀಸರ್ ನೋಡುಗರ ಮನ ಗೆದ್ದಿದೆ.
ರವಿ ಬಸ್ರೂರ್ ಮ್ಯೂಸಿಕ್ ಮತ್ತು ಮೂವೀಸ್ ಅರ್ಪಿಸುತ್ತಿರುವ, ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಕ್ಷೇತ್ರಪತಿ ಚಿತ್ರ ಪೊಲಿಟಿಕಲ್ ಡ್ರಾಮಾ ಕಥಾಹಂದರ ಹೊಂದಿದೆ. ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಸಹ ನಿರ್ಮಾಣವಿರುವ ಈ ಚಿತ್ರ ಆಗಸ್ಟ್ 18 ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ. ಶ್ರೀಕಾಂತ್ ಕಟಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ. ವಿ. ಬಿ. ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನವೀನ್ ಶಂಕರ್ , ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.