ಮಂಡ್ಯ: ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ನಾಲ್ವರು ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಇದರೊಂದಿಗೆ ಸಚಿವ ಚಲುವರಾಯಸ್ವಾಮಿ ವೈಯಕ್ತಿಕವಾಗಿ ತಲಾ 50 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ನನ್ನ ಹಾಗೂ ಸಚಿವ ಮಹದೇವಪ್ಪ ಅವರ ಮನವಿ ಮೇರೆಗೆ ಪರಿಹಾರ ನೀಡಲು ಸಿಎಂ ಸೂಚನೆ ನೀಡಿದ್ದಾರೆ. ಮಂಡ್ಯ ಹಾಗೂ ಮೈಸೂರು ಡಿಸಿಗಳು ಪರಿಹಾರಕ್ಕೆ ವರದಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿದ್ದು, ಘಟನೆಯಲ್ಲಿ ಸಾವನ್ನಪ್ಪಿರುವ ಮೂವರು ಟಿ.ನರಸಿಪುರ ತಾಲೂಕಿನ ಗೊರವನಹಳ್ಳಿ ಗ್ರಾಮದವರು. ಈ ಘಟನೆ ಜರುಗಬಾರದಿತ್ತು, ಈ ಘಟನೆ ತುಂಬಾ ದುಃಖ ತಂದಿದೆ ಎಂದಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ರಸ್ತೆ ಚೆನ್ನಾಗಿದೆ. ಆದ್ರೆ ಇದಕ್ಕೆ ಅತಿವೇಗ ಕಾರಣ ಇರಬಹುದು ಅನ್ನಿಸುತ್ತೆ. ವಾಹನ ಸವಾರರು ಜಾಗರೂಕತೆಯಿಂದ ಚಾಲನೆ ಮಾಡಬೇಕು. ಸದ್ಯ ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಸೂಚಿಸಿದ್ದು, ಮೈಸೂರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳು ಇದರ ಫಾಲೋಅಪ್ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಏನಿದು ಘಟನೆ?
ಮೂರೇ ದಿನಗಳ ಅಂತರದಲ್ಲಿ ಸಂಭವಿಸಿದ ಎರಡು ಅಪಘಾತಗಳಲ್ಲಿ ಐವರು ಜಲ ಸಮಾಧಿಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶನಿವಾರ ತಡರಾತ್ರಿಯೂ ಇಲ್ಲಿನ ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿಬಿದ್ದು ಗಾಮನಹಳ್ಳಿ ಗ್ರಾಮದ ಮಹದೇವಮ್ಮ, ಗೊರವನಹಳ್ಳಿ ಗ್ರಾಮದ ಸಂಜನಾ, ಮಮತಾ, ರೇಖಾ ಮಹಿಳೆಯರು ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಕಳೆದ ಮೂರು ದಿನಗಳ ಹಿಂದೆಯಷ್ಟೇ ತಿಬ್ಬನಹಳ್ಳಿ ಬಳಿಯ ವಿಸಿ ನಾಲೆಗೆ ಕಾರು ಉರುಳಿಬಿದ್ದು ಚಾಲಕನೊಬ್ಬ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.