ಬೆಂಗಳೂರು ;- ಉಡುಪಿ ವಿಡಿಯೋ ಇದ್ದರೆ ತೋರಿಸಿ ಎಂದ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಎನ್ ರವಿಕುಮಾರ್ ತಿರುಗೇಟು ನೀಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಬುದ್ಧಿವಂತರು, ಅವರಿಗೆ ಪ್ರೂಫ್ ಏನಿದೆ ಅಂತಾ ನಾನು ಹೇಳುತ್ತೇನೆ. ಕಳೆದ ಒಂದು ವರ್ಷದಿಂದ ಗೌಪ್ಯವಾಗಿ ವಿಡಿಯೋ ಚಿತ್ರೀಕರಣ ನಡೆಯುತ್ತಿತ್ತು ಅಂತಾ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಅಷ್ಟು ಮಾತ್ರವಲ್ಲದೆ, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದೆವು ಎಂದು ಸ್ವತಃ ವಿಡಿಯೋ ಚಿತ್ರೀಕರಣ ಮಾಡಿದ್ದ ವಿದ್ಯಾರ್ಥಿನಿಯರೇ ಪತ್ರದ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು.
ನಾವು ರೆಕಾರ್ಡ್ ಮಾಡುತ್ತಾ ಇದ್ದೆವು ಅಂತ ಸ್ವತಃ ವಿದ್ಯಾರ್ಥಿನಿಯರೇ ಕಾಲೇಜು ಆಡಳಿತ ಮಂಡಳಿಗೆ ಕ್ಷಮಾಪಣೆ ಪತ್ರ ಬರೆದಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದು ಎನ್ ರವಿಕುಮಾರ್ ಕೇಳಿದರು. ಅಲ್ಲದೆ, ಹಿಂದೂ ವಿದ್ಯಾರ್ಥಿನಿಯರು ಮೂರು ಜನ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ವಿಡಿಯೋ ಮಾಡಿದ್ದಿದ್ದರೆ ನೀವು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಇಷ್ಟೊಂದು ತುಷ್ಠೀಕರಣ, ಓಲೈಕೆ, ಮತ ಬ್ಯಾಂಕ್ ರಾಜಕಾರಣ ಮಾಡುವುದೇ? ಮಹಿಳೆಯರ ಸುರಕ್ಷತೆ ಬಲಿ ಕೊಟ್ಟು ರಾಜಕಾರಣ ಮಾಡುವುದಾದರೆ ನಿಮ್ಮ ರಾಜಕಾರಣ ರಾಜ್ಯಕ್ಕೆ ಅವಶ್ಯಕತೆಯಿಲ್ಲ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಎನ್ ರವಿಕುಮಾರ್ ಆಕ್ರೋಶ ಹೊರಹಾಕಿದರು.