ಅರಶಿನಗುಂಡಿ ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಶರತ್ ಶವ ಪತ್ತೆ

ಉಡುಪಿ: ಕಳೆದೊಂದು ವಾರದ ಹಿಂದೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತಕ್ಕೆ ತೆರಳಿ ವೀಕ್ಷಣೆ ವೇಳೆ ಕಾಲುಜಾರಿ ಬಿದ್ದು ನೀರುಪಾಲಾಗಿದ್ದ ಯುವಕನ ಮೃತದೇಹ ಭಾನುವಾರ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕೆ.ಎಚ್. ನಗರದ ಸುಣ್ಣದಹಳ್ಳಿ ನಿವಾಸಿ ಶರತ್ ಕುಮಾರ್ (23) ಮೃತರಾದವರು.
ಜು. 23 ರಂದು ಕೊಲ್ಲೂರಿನ ಅರಶಿನಗುಂಡಿ ಜಲಪಾತಕ್ಕೆ ಸ್ನೇಹಿತನೊಂದಿಗೆ ಬಂದಿದ್ದ ಶರತ್ ಕುಮಾರ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದರು. ಇವರಿಗಾಗಿ ಕಳೆದೊಂದು ವಾರದಿಂದ ಹುಡುಕಾಟ ನಡೆಸಲಾಗಿತ್ತು.

ಪೊಲೀಸರು, ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ್ ಮಲ್ಪೆ, ಜ್ಯೋತಿರಾಜ್ ಹಾಗೂ ಎನ್ಡಿಆರ್ಎಫ್ ತಂಡದಿಂದ ಸತತವಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಈ ಭಾಗದಲ್ಲಿ ಅತಿಯಾದ ಮಳೆ ಇದ್ದ ಕಾರಣ ಪತ್ತೆ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ. ಬಳಿಕ ಡ್ರೋಣ್ ಮೂಲಕವೂ ಹುಡುಕಾಟ ನಡೆಸಲಾಗಿತ್ತು.
ಕಳೆದೆರಡು ದಿನಗಳಿಂದ ಈ ಪರಿಸರದಲ್ಲಿ ವರುಣನ ಅಬ್ಬರ ಸ್ವಲ್ಪ ತಗ್ಗಿರುವುದರಿಂದ ನೀರಿನ ಹರಿವು ಕಡಿಮೆಯಾಗಿತ್ತು. ಭಾನುವಾರ ಬೆಳಗ್ಗೆ ಶರತ್ ಕುಮಾರ್ ಅವರ ಮೃತದೇಹ ಅರಶಿನಗುಂಡಿ ಜಲಪಾತದಿಂದ 200 ಮೀಟರ್ ಕೆಳಗಡೆ ಪೊಟರೆಯೊಳಗೆ ಸಿಲುಕಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

Loading

Leave a Reply

Your email address will not be published. Required fields are marked *