ಬೆಂಗಳೂರು: ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ವರಿಷ್ಠರು ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ಪಷ್ಟಪಡಿಸಿದರು. ನಗರದಲ್ಲಿ ಮಾತನಾಡಿದ ಅವರು, ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡ್ತಾರೆ ಎನ್ನುವ ವಿಚಾರ ಗೊತ್ತಿಲ್ಲ. ನಾನು ಈಗ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ. ರಾಜ್ಯಾಧ್ಯಕ್ಷ ಸ್ಥಾನ ಅನ್ನೋದು ಒಂದು ದೊಡ್ಡ ಜವಾಬ್ದಾರಿ. ಅದನ್ನು ಕೇಳಿ ಪಡೆಯಲು ಆಗಲ್ಲ. ಭವಿಷ್ಯ ನಿರೀಕ್ಷೆ ಮತ್ತು ಆಕಾಂಕ್ಷೆ ಇಲ್ಲ. ಭವಿಷ್ಯದ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಡಬೇಕು, ಯಾವಾಗ ಕೊಡಬೇಕು ಅಂತ ದೊಡ್ಡವರು ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟ ವಿಚಾರವಾಗಿ ಮಾತನಾಡಿ, ಯಾವ ಹುದ್ದೆಯೂ ಶಾಶ್ವತ ಅಲ್ಲ. ಹಲವು ಹುದ್ದೆಗಳಲ್ಲಿ ಸ್ಥಾನ ಕೊಟ್ಟಿದ್ದಾರೆ. ನಾನು ಯಾವಾಗಲೂ ಕಾರ್ಯಕರ್ತ. ಆಗಲೂ, ಈಗಲೂ ನಾನು ಕಾರ್ಯಕರ್ತ. ಈಗಲೂ ಅದೇ ಸೇವಾಭಾವದಿಂದ ಕೆಲಸ ಮಾಡ್ತೀನಿ ಎಂದು ಹೇಳಿದರು. ಉಡುಪಿ ವೀಡಿಯೋ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಏನೂ ಇಲ್ಲ ಅಂತಿದ್ದರೆ ಆ ವಿದ್ಯಾರ್ಥಿನಿಯರನ್ನು ಯಾಕೆ ಸಸ್ಪೆಂಡ್ ಮಾಡಿದ್ರು? ಪ್ರಕರಣದಲ್ಲಿ ಹಲವು ಸಂಶಯಗಳಿವೆ. ಸರಿಯಾದ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು.