“ಇಲ್ಲಿ ಯಾವ ರೀತಿಯಲ್ಲಿ ಆಡಬೇಕಿತ್ತೋ ಆ ರೀತಿಯಲ್ಲಿ ನಾವು ಆಡಲಿಲ್ಲʼʼ: ಶೇಯ್ ಹೋಪ್ ಆರೋಪ

ಅಧಿಕಾರಯುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ, ಆತಿಥೇಯ ವೆಸ್ಟ್ ಇಂಡೀಸ್ ಎದುರು ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 5 ವಿಕೆಟ್ಗಳ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಮೊದಲ ಒಡಿಐನಲ್ಲಿ ವೆಸ್ಟ್ ಇಂಡೀಸ್ ತಂಡದ ಹೀನಾಯ ಪ್ರದರ್ಶನದ ಬಗ್ಗೆ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಕೆರಿಬಿಯನ್ನರ ನಾಯಕ ಶೇಯ್ ಹೋಪ್, ತಂಡದ ಬ್ಯಾಟಿಂಗ್ ವಿಭಾಗದ ಕಳಪೆ ಆಟವನ್ನು ಟೀಕೆ ಮಾಡಿದ್ದಾರೆ.
ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್, ಕೇವಲ 23 ಓವರ್ಗಳಲ್ಲಿ 114 ರನ್ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಆಯಿತು. ನಾಯಕ ಶೇಯ್ ಹೋಪ್, 44 ಎಸೆತಗಳಲ್ಲಿ 43 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ ತಂಡಕ್ಕೆ ಗೌರವದ ಮೊತ್ತ ತಂದುಕೊಡಲು ಸಾಧ್ಯವಾಗಲೇ ಇಲ್ಲ. ಅವರಿಗೆ ಉಳಿದ ಬ್ಯಾಟರ್ಗಳಿಂದ ಸೂಕ್ತ ಬೆಂಬಲ ಲಭ್ಯವಾಗಲಿಲ್ಲ. ಭಾರತೀಯ ಸ್ಪಿನ್ನರ್ಗಳ ಎದುರು ವಿಂಡೀಸ್ ಬ್ಯಾಟರ್ಗಳು ಅಕ್ಷರಶಃ ನಿರುತ್ತರರಾದರು.
“ಇಲ್ಲಿ ಯಾವ ರೀತಿಯಲ್ಲಿ ಆಡಬೇಕಿತ್ತೋ ಆ ರೀತಿಯಲ್ಲಿ ನಾವು ಆಡಲಿಲ್ಲ. ಇದು ಅತ್ಯಂತ ಸವಾಲಿನ ಪಿಚ್. ಇಲ್ಲಿ ರನ್ ಗಳಿಸುವ ದಾರಿಯನ್ನು ನಾವು ಕಂಡುಕೊಳ್ಳಬೇಕಿತ್ತು. ನಾನು ಸುಮ್ಮನೆ ಕಾರಣಗಳನ್ನು ಕೊಡುತ್ತಿಲ್ಲ. ಆದರೆ, ಕ್ರಿಕೆಟ್ ಬಗ್ಗೆ ಜ್ಞಾನ ಇರುವವರಿಗೆ ಇಲ್ಲಿ ನಡೆದದ್ದೇನು ಎಂಬುದರ ವಾಸ್ತವ ಅರ್ಥವಾಗುತ್ತದೆ. ಆದರೆ, ರನ್ ಗಳಿಸುವ ಮಾರ್ಗ ಕಂಡುಕೊಳ್ಳುವಲ್ಲಿ ನಾವು ವಿಫಲರಾಗಿದ್ದು ನಿಜ,” ಎಂದು ತಂಡದ ಬ್ಯಾಟಿಂಗ್ ವಿಭಾಗದ ಪ್ರದರ್ಶನವನ್ನು ಹೋಪ್ ಟೀಕೆ ಮಾಡಿದ್ದಾರೆ.
ಇದೇ ವೇಳೆ ತಂದ ಬೌಲಿಂಗ್ ವಿಭಾಗದ ಪ್ರದರ್ಶನವನ್ನು ನಾಯಕ ಶೇಯ್ ಹೋಪ್ ಶ್ಲಾಘಿಸಿದ್ದಾರೆ. ಅದರಲ್ಲೂ ಯುವ ವೇಗದ ಬೌಲರ್ ಜೇಡೆನ್ ಸೀಲ್ಸ್ ಅವರ ಸಾಮರ್ಥ್ಯವನ್ನು ಮೆಚ್ಚಿಕೊಂಡಿದ್ದಾರೆ. ಹೊಸ ಚೆಂಡಿನಲ್ಲಿ ಅಮೋಘ ದಾಳಿ ಸಂಘಟಿಸಿದ ಸೀಲ್ಸ್, 4 ಓವರ್ಗಳಲ್ಲಿ 21 ರನ್ ಮಾತ್ರವೇ ಕೊಟ್ಟು 1 ವಿಕೆಟ್ ಪಡೆದರು. ಭಾರತ ತಂಡದ ಯುವ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ಗೆ ಪೆವಿಲಿಯನ್ ದಾರಿ ತೋರಿದರು.

Loading

Leave a Reply

Your email address will not be published. Required fields are marked *