ಬೆಂಗಳೂರು: ಜನವಾರುಗಳಿಗೆ ಹರಡುತ್ತಿರುವ ಮಾರಕ ಕಾಯಿಲೆಗಳು ಕಮ್ಮಿಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇದೀಗ ತಮಿಳುನಾಡು ಭಾಗದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಒಟೈಟಿಸ್ ಎಂಬ ಜಾನುವಾರುಗಳಿಗೆ ಹರಡುವ ಮಾರಕ ಕಾಯಿಲೆ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ.
ಒಟೈಟಿಸ್ ಕಾಯಿಲೆ ಇದೀಗ ಬೆಂಗಳೂರು ಸಮೀಪದ ಆನೆಕಲ್ ಭಾಗದಲ್ಲಿನ ಹೈನುಗಾರರಿಗೆ ತಲೆನೋವಾಗಿದೆ.
ಆನೇಕಲ್ ತಾಲೂಕಿನ ಬಹುತೇಕ ಹಳ್ಳಿಗಳ ಜಾನುವಾರುಗಳಿಗೆ ಈ ಕಾಯಿಲೆ ಹಬ್ಬಿದ್ದು. ಇಂಡ್ಲವಾಡಿ, ಸುರಗಜಕ್ಕನಹಳ್ಳಿ, ವಣಕನಹಳ್ಳಿ,ದಿನ್ನೂರು ಸೇರಿ ಹಲವೆಡೆ ರಾಸುಗಳು ಸಾವಿಗೀಡಾಗಿವೆ.
ಈ ಕಾಯಿಲೆ ಬಂದಲ್ಲಿ ಹಸು ಸಾವಿಗೀಡಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.
ಈ ಕಾಯಿಲೆ ಕಾಣಿಸಿಕೊಂಡ ಹಸುಗಳಿಗೆ ಆರಂಭದಲ್ಲಿ ಕಿವಿ ಸೋರಲು ಪ್ರಾರಂಭ ಆಗುತ್ತದೆ. ಬಳಿಕ ತಲೆ ನೋವು ಕಾಣಿಸಿಕೊಂಡು ಸೊರಗುತ್ತದೆ. ಇದಾದ ಮೇಲೆ ಮೂಗು, ಬಾಯಿ, ಕಿವಿ ಕೂಡ ಸೋರಲು ಪ್ರಾರಂಭ ಆಗುತ್ತದೆ. ಕಳೆದ ವರ್ಷ ಇದೇ ವೈರಲ್ ಕಾಯಿಲೆಯನ್ನು ವಿಜ್ಞಾನಿಗಳು MCF ಎಂದು ಕರೆದಿದ್ದು, ಈ ಕಾಯಿಲೆಗೆ ನಿರ್ದಿಷ್ಟ ಔಷದ ಇಲ್ಲದೇ ರೈತರು ಪರದಾಡುತ್ತಿದ್ದಾರೆ.