ಮತ್ತೆ ನಿರ್ದೇಶನದತ್ತ ‘ಕಲಾಕರ್’: ತಮ್ಮದೇ ಬ್ಯಾನರ್ ನಡಿ ಹೊಸ ಸಿನಿಮಾ ಘೋಷಿಸಿದ ಹರೀಶ್ ರಾಜ್

ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಸಿನಿಮಾಪ್ರೇಮಿಗಳನ್ನು ರಂಜಿಸುತ್ತಿರುವ ಕಲಾಕರ್ ಹರೀಶ್ ರಾಜ್ ಕಲಾ ಸೇವೆಗೆ ಭರ್ತಿ 25 ತುಂಬಿದೆ. ಬೆಳ್ಳಿ ಸಂಭ್ರಮದ ಖುಷಿಯಲ್ಲಿರುವ ಅವರೀಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲಿಯೂ ಹೆಸರು ಮಾಡಿರುವ ಹರೀಶ್ ರಾಜ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ತಮ್ಮದೇ ಹರೀಶ್ ರಾಜ್ ಪ್ರೊಡಕ್ಷನ್ ನಡಿ ಪ್ರೇತ ಎಂಬ ಚಿತ್ರ ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಮೊಬೈಲ್ ಟರ್ಚ್ ಬೆಳಕಿನಲ್ಲಿ ಕತ್ತಲೇ ಕಾಡಿನಲ್ಲಿ ಭಯಭೀತರಾಗಿ ನಿಂತಿರುವ ಹರೀಶ್ ರಾಜ್, ಅವರ ಹಿಂದೆ ಭೂತದ ರೀತಿಯ ಆಕೃತಿ ಲುಕ್ ಸಿನಿಮಾಪ್ರೇಮಿಗಳ ಥ್ರಿಲ್ ಹೆಚ್ಚಿಸಿದೆ .
ಪ್ರೇತ.. ಟೈಟಲ್ ಹೇಳುವಂತೆ ಇದೊಂದು ಹಾರರ್ ಸಿನಿಮಾ. ಈ ಚಿತ್ರಕ್ಕೆ ಹರೀಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಹಿರಾ ಶೆಟ್ಟಿ, ಅಮೂಲ್ಯ ಭಾರದ್ವಾಜ್, ಬಿ ಎಂ ವೆಂಕಟೇಶ್, ಅಮಿತ್ ತಾರಾಬಳಗದಲ್ಲಿದ್ದಾರೆ. ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನ ಚಿತ್ರಕ್ಕಿದೆ. ಹಾಡುಗಳಿಗೆ ಪ್ರಮೋದ್ ಮರವಂತೆ ಸಾಹಿತ್ಯ ಒದಗಿಸಿದ್ದಾರೆ.
ಪ್ರೇತ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿದ್ದು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬರುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಪ್ರೇತ ಸಿನಿಮಾವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ತೆರೆಗೆ ತರಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಇನ್ನು, ವಿರಾಜಪೇಟೆ, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕಲಾಕರ್, ಗನ್, ಶ್ರೀ ಸತ್ಯನಾರಾಯಣ, ಕಿಲಾಡಿ ಪೊಲೀಸ್ ಸೇರಿದಂತೆ ಹಲವು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಹರೀಶ್ ರಾಜ್ ಮೂರು ವರ್ಷದ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ಸಹಜವಾಗಿ ನಿರೀಕ್ಷೆ ದುಪ್ಪಟ್ಟು ಮಾಡಿದೆ.

Loading

Leave a Reply

Your email address will not be published. Required fields are marked *