ನವದೆಹಲಿ: ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಸಲ್ಲಿಸಲಾಗಿದೆ. ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ ಸಮಿತಿ ಬುಧವಾರ ನೋಟಿಸ್ಗಳನ್ನು ಸಲ್ಲಿಸಿವೆ.
ಲೋಕಸಭೆಯಲ್ಲಿ ಕಾಂಗ್ರೆಸ್ನ ಉಪ ನಾಯಕ ಗೌರವ್ ಗೊಗೊಯ್ ಅವರು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಕಚೇರಿಗೆ ನೋಟಿಸ್ ಸಲ್ಲಿಸಿದ್ದಾರೆ. ಅವಿಶ್ವಾಸ ಗೊತ್ತುವಳಿ ಮಂಡನೆಗೆ ಪ್ರತ್ಯೇಕ ನೋಟಿಸ್ ಅನ್ನು ಭಾರತ್ ರಾಷ್ಟ್ರ ಸಮಿತಿ ಸಂಸದ ನಾಗೇಶ್ವರ್ ರಾವ್ ಅವರು ಸ್ಪೀಕರ್ಗೆ ಸಲ್ಲಿಸಿದ್ದಾರೆ.
ಮುಂದಿನ ಹಂತದಲ್ಲಿ ಲೋಕಸಭೆಯ ಸ್ಪೀಕರ್ ಕ್ರಮಬದ್ಧವಾಗಿ ನಿರ್ಣಯವನ್ನು ಸದನದಲ್ಲಿ ಓದಲಿದ್ದಾರೆ. ಬಳಿಕ ಅದನ್ನು ಮತಕ್ಕೆ ಹಾಕಲಿದ್ದಾರೆ. ವಿಪಕ್ಷಗಳ ಈ ಕಸರತ್ತಿನಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಯಾವುದೇ ಅಪಾಯಗಳಿಲ್ಲ. ಎನ್ಡಿಎ ಒಕ್ಕೂಟಕ್ಕೆ 332 ಸದಸ್ಯರ ಬೆಂಬಲವಿದ್ದು, ವಿಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ 144 ಅಸುಪಾಸಿನ ಬೆಂಬಲವಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಸದನದಲ್ಲಿ ಮಾತನಾಡಬೇಕು ಎಂದು ಒತ್ತಾಯಿಸುತ್ತಿರುವ ಪ್ರತಿಪಕ್ಷ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಪ್ರಧಾನಿ ನರೇಂದ್ರ ಮೋದಿ ಮಾತನಾಡದ ಹಿನ್ನೆಲೆ ಜುಲೈ 20 ರಿಂದ ಆರಂಭವಾಗಿರುವ ಕಲಾಪ ನಿರಂತರವಾಗಿ ಮುಂದೂಡಿಕೆಯಾಗುತ್ತಿದೆ.