ಮೈಸೂರು: ಕೇರಳದ ವಯನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದ ಮಟ್ಟ 2,281.27 ಅಡಿಗಳಿಗೆ ಏರಿಕೆಯಾಗಿದೆ. ಒಳಹರಿವು 25,685 ಕ್ಯೂಸೆಕ್ಗೆ ಏರಿಕೆಯಾಗಿದ್ದು, ಕರ್ನಾಟಕ-ಕೇರಳ ಗಡಿಯಲ್ಲಿರುವ ಬಾಲಾವಿ ಗೇಜಿಂಗ್ ಸ್ಟೇಷನ್ನಲ್ಲಿ ಒಳಹರಿವಿನ ಪ್ರಮಾಣವನ್ನು 20,000 ಕ್ಯೂಸೆಕ್ಗೆ ಏರಿಕೆಯಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆಳವಣಿಗೆ ತಮಿಳುನಾಡು ರಾಜ್ಯಕ್ಕೆ ಕೊಂಚ ನಿರಾಳವನ್ನು ನೀಡಿದಂತಾಗಿದೆ. ಜೂನ್ ಮತ್ತು ಜುಲೈ ತಿಂಗಳಿಗೆ ತನ್ನ ಪಾಲಿನ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶ ನೀಡುವಂತೆ ತಮಿಳುನಾಡು ಸರ್ಕಾರ ಈ ಹಿಂದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಪತ್ರ ಬರೆದಿತ್ತು.
ರಾಜ್ಯದಲ್ಲಿ ಅಲ್ಪ ಪ್ರಮಾಣದ ಮಳೆಯಾಗಿರುವುದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿತ್ತು. ಆದರೆ ಕಬಿನಿ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಇದೀಗ ನೀರು ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಡಿಬಿ ಕುಪ್ಪೆ ಮತ್ತು ಕೇರಳದ ಗಡಿ ಭಾಗದ ಗ್ರಾಮಗಳ ನಡುವೆ ಬೋಟಿಂಗ್ ಸೌಲಭ್ಯವನ್ನು ಬಂದ್ ಮಾಡಲಾಗಿದೆ.