ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಯಾನಕ ಸ್ಫೋಟ ನಡೆಸಲು ಸ್ಕೆಚ್ ಹಾಕಿದ್ದ ಐವರು ಶಂಕಿತ ಉಗ್ರರ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, 4 ಸಜೀವ ಗ್ರೆನೇಡ್ಗಳನ್ನ ಸಿಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಬೆಂಗಳೂರಿನ ಕೋಡಿಗೆಹಳ್ಳಿಯ ಜುನೈದ್ ಮನೆಯೊಂದರಲ್ಲಿ ಅಡಗಿಸಿಟ್ಟಿದ್ದ ಗ್ರೆನೇಡ್ಗಳನ್ನ ಸಿಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಪೌಡರ್ ರೂಪದ ಕೆಮಿಕಲ್ನಿಂದ ಸ್ಫೋಟವಾಗದಂತೆ ಅಡಗಿಸಿಟ್ಟಿದ್ದ ನಾಲ್ಕೈದು ಗ್ರೆನೇಡ್ಗಳನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಮಾಡಿ, ಸೀಜ್ ಮಾಡಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ, ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ವಿದ್ವಂಸಕ ಕೃತ್ಯಗಳನ್ನ ಎಸಗಲು ಒಳಸಂಚು ನಡೆಸಿರುವುದು ಕಂಡುಬಂದಿತ್ತು. ಆರೋಪಿಗಳು ತಮ್ಮ ಕಾರ್ಯಸಾಧನೆಗಾಗಿ ಕೆಲ ವಾರಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ದುಷ್ಕೃತ್ಯಕ್ಕೆ ಬೇಕಾಗುವ ಸಲಕರಣೆಗಳನ್ನ ಸಂಗ್ರಹಿಸಿಕೊಂಡಿದ್ದರು. ಜು.19ರಂದು ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ವಾರ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲು ತನಿಖಾಧಿಕಾರಿ ಸೇರಿ ಇಬ್ಬರು ಎಸಿಪಿ, 6 ಜನ ಪೊಲೀಸ್ ಇನ್ಸ್ಪೆಕ್ಟರ್ಗಳ ವಿಶೇಷ ತಂಡ ರಚಿಸಲಾಗಿದ್ದು, ತೀವ್ರಗತಿಯಲ್ಲಿ ಮುಂದುವರಿದಿದೆ ಎಂದು ಹೇಳಿದರು.