ನವದೆಹಲಿ: ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆಯರನ್ನ ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಣಿಪುರ ಘಟನೆಯು ಸಭ್ಯ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ನನ್ನ ಹೃದಯವು ನೋವು ಮತ್ತು ಕೋಪದಿಂದ ತುಂಬಿದೆ ಎಂದು ಹೇಳಿದರು
ನಾನು ದೇಶದ ಜನತೆಗೆ ಭರವಸೆ ನೀಡುತ್ತೇನೆ. ಪ್ರಕರಣದ ತಪ್ಪಿತಸ್ಥರನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾನೂನು ತನ್ನ ಎಲ್ಲಾ ಶಕ್ತಿಯೊಂದಿಗೆ ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಮಣಿಪುರದ ಸಹೋದರಿಯರ ಜೊತೆಗೆ ನಡೆದ ಘಟನೆ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ರಾಜಸ್ಥಾನ, ಮಣಿಪುರ ಅಥವಾ ಛತ್ತೀಸ್ಗಢ ಆಗಿರಲಿ, ನಮ್ಮ ಎಲ್ಲಾ ಮಹಿಳೆಯರಿಗೆ ರಕ್ಷಣೆ ನೀಡಲು ಕಠಿಣ ಕಾನೂನು ಜಾರಿ ಮಾಡಲು ನಾನು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇನೆ. ರಾಜಕೀಯಕ್ಕಿಂತ ಮಿಗಿಲಾಗಿ ಮಹಿಳೆಯರ ರಕ್ಷಣೆ ಬಗ್ಗೆ ನಾವು ಚಿಂತಿಸಬೇಕು ಎಂದು ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಣಿಪುರ ಸಿಎಂ ಬಿರೇನ್ ಸಿಂಗ್ಗೆ ದೂರವಾಣಿ ಮೂಲಕ ಮಾತನಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚನೆ ಕೊಟ್ಟಿದ್ದಾರೆ. ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನ ಬೆತ್ತಲೆಯಾಗಿ ಮೆರವಣಿಗೆ ಮಾಡುವ ಎರಡು ತಿಂಗಳ ಹಳೆಯ ವೀಡಿಯೊ ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು ಪ್ರಕರಣ ಸಾಕಷ್ಟು ಗಂಭೀರತೆ ಪಡೆದುಕೊಂಡಿದೆ. ಈಗಾಗಲೇ ಆರೋಪಿಯನ್ನ ಬಂಧಿಸಲಾಗಿದೆ.