ಕಳೆದ ಕೆಲ ದಿನಗಳ ಹಿಂದೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ನಟಿ ರಮ್ಯಾ ಲೆಕ್ಚರರ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ಮೋಹಕ ತಾರೆ ರಮ್ಯಾ ಬಹು ವರ್ಷಗಳ ಬಳಿಕ ಕಮ್ಬ್ಯಾಕ್ ಆಗಿದ್ದನ್ನು ನೋಡಿ ಫ್ಯಾನ್ಸ್ ಸಖತ್ ಖುಷ್ ಆಗಿದ್ದರು.
ಆದರೆ ಇದೀಗ ನಟಿ ರಮ್ಯಾ ಸಿನಿಮಾ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹಾಸ್ಟೆಲ್ ಹುಡುಗರು ಚಿತ್ರದ ಟ್ರೈಲರ್ ನಲ್ಲಿ ತಮ್ಮ ದೃಶ್ಯಗಳನ್ನು ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ರಮ್ಯಾ ತಕರಾರು ತೆಗೆದಿದ್ದಾರೆ. ತನ್ನ ಒಪ್ಪಿಗೆ ಇಲ್ಲದೇ ಯಾವ ದೃಶ್ಯ ಬಳಸಬಾರದು ಎಂದು ತಡೆಯಾಜ್ಞೆ ನೀಡಿದ್ದಾರೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಹಾಗೂ ಎಲ್ಲ ಕಡೆಗಳಿಂದ ತಮ್ಮ ದೃಶ್ಯ, ಫೋಟೊ, ಸುದ್ದಿ ಮತ್ತಿತ್ತರ ಕಂಟೆಂಟ್ಗಳನ್ನು ತೆಗೆದುಹಾಕಬೇಕು ಎಂದು ರಮ್ಯಾ ಡಿಮ್ಯಾಂಡ್ ಮಾಡಿದ್ದು, 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
ಜುಲೈ 21ರಂದು ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದ್ದು ಈ ಮಧ್ಯೆ ರಮ್ಯಾ ನೋಟಿಸ್ ನೀಡಿರುವುದು ಚಿತ್ರತಂಡಕ್ಕೆ ತಲೆ ನೋವಾಗಿದೆ. ಅಷ್ಟೇ ಅಲ್ಲದೇ ರಮ್ಯಾ ಅವರು ಈ ಸಿನಿಮಾದ ಪ್ರೋಮೊ ಶೂಟ್ನಲ್ಲಿ ಭಾಗಿ ಆಗಿದ್ದರು. ಕೊನೆಯ ಕ್ಷಣದಲ್ಲಿ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಸಡನ್ ಆಗಿ ಲೀಗಲ್ ನೋಟಿಸ್ ನೀಡಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಇದರಲ್ಲಿ ರಮ್ಯಾ, ರಿಷಬ್ ಶೆಟ್ಟಿ, ದಿಗಂತ್, ಪವನ್ ಕುಮಾರ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಆದರೆ ಈ ಟ್ರೇಲರ್ ಅನ್ನು ಯೂಟ್ಯೂಬ್ ಮುಂತಾದ ಕಡೆಗಳಿಂದ ತೆಗೆದು ಹಾಕಬೇಕು ಎಂದು ಕೋರ್ಟ್ ಆದೇಶಿಸಿದೆ ಎಂದು ಈ ಲೀಗಲ್ ನೋಟೀಸ್ನಲ್ಲಿ ತಿಳಿಸಲಾಗಿದೆ.