ಬೆಂಗಳೂರು, (ಜುಲೈ 19): ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಭಯೋತ್ಪಾದಕರನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಸಯ್ಯದ್ ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್ ಬಂಧಿತ ಶಂಕಿತ ಉಗ್ರರರು. ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. 2017ರ ಅಕ್ಟೋಬರ್ನಲ್ಲಿ ಬೆಂಗಳೂರಿನ(Bengaluru) ಆರ್.ಟಿ.ನಗರದಲ್ಲಿ ನಡೆದಿದ್ದ ಮೂವರ ಕಿಡ್ನ್ಯಾಪ್, ಓರ್ವನ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಹಲವು ಆರೋಪಿಗಳು, ಪರಪ್ಪನ ಅಗ್ರಹಾರ ಜೈಲಿನಿಂದ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದ್ದು, ಈ ಬಗ್ಗೆ ಐದು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಆರ್ ಟಿ ನಗರ ಕೊಲೆ ಕೇಸ್ನ ಅರೋಪಿಗಳು ಜೈಲಿನಲ್ಲಿ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದಾರೆ. ನಂತರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದರು. ಇದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಒಗ್ಗೂಡಿಸುತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಕೇಂದ್ರ, ಸಿಸಿಬಿ ಮಾಹಿತಿ ಸಂಗ್ರಹ ಮಾಡಿತ್ತು. ಮಾಹಿತಿ ಅನ್ವಯ ಸಿಸಿಬಿ ಜೊತೆಗೆ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದೆ.