ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್ 21 ರಿಂದ ಸೆ.16ರವರೆಗೆ ಜಿಲ್ಲೆಯಾದ್ಯಂತ ಬಂದ್: ಕೋಡಿಹಳ್ಳಿ ಚಂದ್ರಶೇಖರ್

ತುಮಕೂರು: ಕೊಬ್ಬರಿಯ ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಬ್ಬರಿ ಬೆಳೆಗಾರರ ಹಿತ ಕಾಯುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್ 21 ರಿಂದ ಸೆ.16ರವರೆಗೆ ಕೊಬ್ಬರಿ ಬೆಳೆಯುವ ಎಲ್ಲಾ ತಾಲೂಕುಗಳಲ್ಲಿ ಬಂದ್ ನಡೆಸಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಸ್ಟ್ 1ರಂದು ಚಿಕ್ಕನಾಯಕನಹಳ್ಳಿ ತಾಲೂಕು ಕೇಂದ್ರದಲ್ಲಿ ಬಂದ್ ಆಚರಿಸಲಾಗುವುದು. ನಂತರದಲ್ಲಿ ತೆಂಗು ಬೆಳೆಯುವ ಸುಮಾರು 33 ತಾಲೂಕು ಕೇಂದ್ರಗಳಲ್ಲಿಯೂ ಬಂದ್ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದಕ್ಕೆ ಸಾರ್ವಜನಿಕರು, ಕೊಬ್ಬರಿ ಮತ್ತು ತೆಂಗು ಬೆಳೆಗಾರರು ಸಹಕಾರ ನೀಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕೆಂದರು.
ಒಂದೆಡೆ ಕೊಬ್ಬರಿ ಸೇರಿದಂತೆ ರೈತರು ತಮ್ಮ ಉತ್ಪನ್ನಗಳಿಗೆ ಬೆಲೆ ಇಲ್ಲದೆ ಪರದಾಡುತ್ತಿದ್ದರೇ, ಯುಪಿಎ ಮತ್ತು ಎನ್ಡಿಎ ಮಿತ್ರ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆ ಗೆಲ್ಲಲ್ಲು ತಂತ್ರ, ಪ್ರತಿತಂತ್ರ ರೂಪಿಸುತ್ತಿವೆ. ಕೃಷಿ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ನೀಡಬೇಕೆಂಬುದು ನಿಮ್ಮ ಅಜೆಂಡಾದದಲ್ಲಿ ಇಲ್ಲವೆ ಎಂದು ಪ್ರಶ್ನಿಸಿದ ಕೋಡಿಹಳ್ಳಿ, ಸರ್ಕಾರ ಆಗಸ್ಟ್ 15ರೊಳಗೆ ಕೊಬ್ಬರಿಗೆ ತೋಟಗಾರಿಕಾ ಇಲಾಖೆ ಶಿಫಾರಸು ಮಾಡಿರುವ 16730 ರು. ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಆಗಸ್ಟ್ 16ರಿಂದ ವಿಧಾನಸೌಧ ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ನುಡಿದರು.
ರಾಜ್ಯದ ಸುಮಾರು 10 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಆದರೆ 20 ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕುಂಠಿತವಾಗಿದೆ. ಕೂಡಲೇ ಸರ್ಕಾರ ಮಳೆ ಕೊರತೆ ಇರುವ ಜಿಲ್ಲೆಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿ, ಪರಿಹಾರ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುವ ಸೇನೆಯ ಉಪಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಕೆಂಕೆರೆ ಸತೀಶ್, ಜಿಲ್ಲಾಧ್ಯಕ್ಷ ಆನಂದ ಪಟೇಲ್, ಗೌರವಾಧ್ಯಕ್ಷ ಧನಂಜಯ ಆರಾಧ್ಯ, ವಿವಿಧ ತಾಲೂಕುಗಳ ಅಧ್ಯಕ್ಷರಾದ ಕೊಡ್ಲಹಳ್ಳಿ ಸಿದ್ದರಾಜು, ಅನಿಲ್ಕುಮಾರ್, ಮಲ್ಲಿಕಾರ್ಜುನ್, ರಾಜಣ್ಣ, ಸಣ್ಣ ದ್ಯಾಮೇಗೌಡ, ಲೋಕೇಶ್, ರುದ್ರೇಶಗೌಡ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Loading

Leave a Reply

Your email address will not be published. Required fields are marked *