ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಆದರೆ ಈ ಸಿನಿಮಾ ಬಿಡುಗಡೆಗೆ ಮುನ್ನವೇ ದಾಖಲೆಗಳನ್ನು ಬರೆಯುತ್ತಿದೆ. ‘ಮಾಸ್ಟರ್’ ಸಿನಿಮಾದ ಬಳಿಕ ನಿರ್ದೇಶಕ ಲೋಕೇಶ್ ಕನಗರಾಜ್ ಹಾಗೂ ವಿಜಯ್ ಒಂದಾಗಿ ಮಾಡುತ್ತಿರುವ ಸಿನಿಮಾ ಇದಾಗಿದ್ದು, ಸತತ ಹಿಟ್ ನೀಡುತ್ತಾ ಬರುತ್ತಿರುವ ಜೋಡಿಯ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಲಿಯೋ ಸಿನಿಮಾ ಬಿಡುಗಡೆ ಮುನ್ನವೇ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ. ಆದ್ರೆ ವಿಷಯ ಲಿಯೋ ಸಿನಿಮಾದ ಬಗ್ಗೆಯಲ್ಲ. ಬದಲಾಗಿ ವಿಜಯ್ ನಟಿಸಲಿರುವ ಹೊಸ ಸಿನಿಮಾ ಇನ್ನೂ ಸೆಟ್ಟೇರಿಲ್ಲ ಅದಾಗಲೇ ಸಿನಿಮಾಕ್ಕೆ ಬೇಡಿಕೆ ಶುರುವಾಗಿದೆ.
‘ಲಿಯೋ’ ಸಿನಿಮಾದ ಬಳಿಕ ವಿಜಯ್ ತಮ್ಮ 68ನೇ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾವನ್ನು ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶನ ಮಾಡಲಿದ್ದು, ಈ ಚಿತ್ರದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ, ಆದರೆ ಈಗಾಗಲೇ ಸಿನಿಮಾದ ಆಡಿಯೋ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ತಮಿಳು ಚಿತ್ರರಂಗದಲ್ಲಿಯೇ ಯಾವ ಸಿನಿಮಾದ ಆಡಿಯೋ ಹಕ್ಕುಗಳು ಸಹ ಮಾರಾಟವಾಗದ ಬೆಲೆಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ದಳಪತಿ ವಿಜಯ್ರ 68ನೇ ಸಿನಿಮಾದ ಆಡಿಯೋ ಹಕ್ಕನ್ನು ಟಿ-ಸೀರೀಸ್ ಪಡೆದುಕೊಂಡಿದೆ. ಸಿನಿಮಾದ ಚಿತ್ರೀಕರಣ ಶುರುವಾಗುವ ಮುನ್ನ ಸಿನಿಮಾದ ಆಡಿಯೋ ಟ್ರ್ಯಾಕ್ಗಳನ್ನು ಕೇಳಿಯೇ ಟಿ-ಸೀರೀಸ್ ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಸಿನಿಮಾದ ಹಾಡುಗಳು ಪಕ್ಕಾ ಸೂಪರ್ ಹಿಟ್ ಆಗಲಿವೆ ಎಂಬುದು ಟಿ-ಸೀರೀಸ್ ನಂಬಿಕೆ. ಅಂದಹಾಗೆ, ಈ ಸಿನಿಮಾದ ಆಡಿಯೋ ಹಕ್ಕುಗಳಿಗೆ ಟಿ-ಸೀರೀಸ್ ನೀಡಿರುವ ಮೊತ್ತ ಬರೋಬ್ಬರಿ 30 ಕೋಟಿ ರೂಪಾಯಿಗಳನ್ನು ನೀಡಲಾಗಿದೆಯಂತೆ.
ವಿಜಯ್ರ 68ನೇ ಸಿನಿಮಾಕ್ಕೆ ಯುವನ್ ಶಂಕರ್ ರಾಜಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳ ಸಂಗೀತ ತಯಾರಾಗಿದ್ದು, ಟ್ರ್ಯಾಕ್ ಹಾಡುಗಳು ಸಹ ರೆಡಿಯಾಗಿವೆಯಂತೆ. ಹಿನ್ನೆಲೆ ಸಂಗೀತವನ್ನು ಚಿತ್ರೀಕರಣ ಮುಗಿದ ಬಳಿಕ ಸೇರಿಸಲಾಗುತ್ತದೆ. ಹಾಡುಗಳು ಬಹಳ ಚೆನ್ನಾಗಿ ಮೂಡಿ ಬಂದಿರುವ ಕಾರಣ ಟಿ-ಸೀರೀಸ್ ಭಾರಿ ದೊಡ್ಡ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿ ಮಾಡಿದೆ.
ವಿಜಯ್ ನಟನೆಯ 68 ಸಿನಿಮಾವು ರಾಜಕೀಯ ವಿಷಯವನ್ನು ಒಳಗೊಂಡಿರಲಿದ್ದು, ನಿರ್ದೇಶಕ ವೆಂಕಟ್ ಪ್ರಭು, ಭಿನ್ನ ರೀತಿಯ ಕತೆಗಳನ್ನು ಹೇಳಲು ಹೊರಟ್ಟಿದ್ದಾರೆ. ಈ ಹಿಂದೆ ಅವರು ‘ಮಾನಾಡು’, ‘ಮಂಕತ್ತ’ ಹಾಗೂ ‘ಕಸ್ಟಡಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.