ಸಿಂಗಾಪುರ: ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಹಿರಿಯ ಸಚಿವ ಎಸ್ ಈಶ್ವರನ್ ವಿರುದ್ಧ ತನಿಖೆಗೆ ಸಿಂಗಾಪುರ ಪ್ರಧಾನಿ ಲೀ ಸಿಯೆನ್ ಲೂಂಗ್ ಆದೇಶಿಸಿದ್ದಾರೆ.
ತನಿಖೆ ಪೂರ್ಣಗೊಳ್ಳುವವರೆಗೆ ಸಚಿವ ಸ್ಥಾನ ತೊರೆಯುವಂತೆ ಈಶ್ವರನ್ ಅವರಿಗೆ ಸೂಚಿಸಲಾಗಿದ್ದು, ಅವರ ವಿರುದ್ಧ ಸಿಪಿಐಬಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ಲೀ ಮಾಹಿತಿ ನೀಡಿದ್ದಾರೆ.
ಈಶ್ವರನ್ ವಿರುದ್ಧದ ತನಿಖೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡದ ಲೀ ಅವರು, ತನಿಖೆ ಪೂರ್ಣಗೊಳ್ಳುವವರೆಗೆ ರಜೆ ತೆಗೆದುಕೊಳ್ಳುವಂತೆ ಈಶ್ವರನ್ ಅವರಿಗೆ ಸೂಚಿಸಿದ್ದಾರೆ.ಅವರ ಅನುಪಸ್ಥಿತಿಯಲ್ಲಿ ಹಿರಿಯ ರಾಜ್ಯ ಸಚಿವ ಚೀಗ್ ಟಾಟ್ ಅವರು ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಧಾನಿಯವರ ಹೇಳಿಕೆಯನ್ನು ಉಲ್ಲೇ ಖಿಸಿ ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.
ಬ್ಯೂರೋ ಬಹಿರಂಗಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಬುಧವಾರ ಸಿಪಿಐಬಿ ನಿರ್ದೇಶಕರು ತನಗೆ ಮಾಹಿತಿ ನೀಡಿದ್ದಾರೆ ಎಂದು ಲೀ ಹೇಳಿದರು. ಔಪಚಾರಿಕ ತನಿಖೆ ನಡೆಸಲು ನಿರ್ದೇಶಕರು ಲೀಯವರ ಒಪ್ಪಿಗೆಯನ್ನು ಕೋರಿದರು.ಡೆನಿಸ್ ಟ್ಯಾಂಗ್ ಅವರು ಪ್ರಧಾನಿ ಕಾರ್ಯಾಲಯದ ಅಡಿಯಲ್ಲಿ ಇರುವ ಆಂಟಿ-ಗ್ರಾಫ್ಟ್ ಏಜೆನ್ಸಿಯ ನಿರ್ದೇಶಕರಾಗಿದ್ದಾರೆ.