ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸಂಬಂಧ ನಂದಿಪರ್ವತ ಆಶ್ರಮಕ್ಕೆ ಭೇಟಿ ಬಳಿಕ ಸಚಿವ ಸತೀಶ್ ಜಾರಕಿಹೊಳಿ, ಆಶ್ರಮದ ಕಮಿಟಿಯವರ ಜೊತೆ ಮಾತುಕತೆ ನಡೆಸಿದ್ದೇನೆ ಎಂದರು. ಹತ್ಯೆಯ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಬಿಐ ತನಿಖೆ ಏನು ಅವಶ್ಯಕತೆ ಇಲ್ಲ. ಆರೋಪಿಗಳು ಸಿಕ್ಕಿಲ್ಲ, ಸ್ಟೋರಿ ಮುಚ್ಚಿಟ್ಟಿದ್ದಾರಂದರೆ ಅದು ಬೇರೆ.
ಪ್ರಕರಣ ಬಗ್ಗೆ ಈಗಾಗಲೇ ಪೊಲೀಸರು ಎಲೆ ಎಲೆಯಾಗಿ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಸದನದಲ್ಲಿ ಗೃಹಸಚಿವರು ನಮ್ಮ ಪೊಲೀಸರು ಸಮರ್ಥರಿದ್ದಾರೆ ಎಂದಿದ್ದಾರೆ. ಸಿಬಿಐ ತನಿಖೆಗೆ ವಹಿಸುವ ಅವಶ್ಯಕತೆ ಇಲ್ಲ. ಎಫ್ಐಆರ್‌ನಲ್ಲಿ ಅವರ ಇಬ್ಬರ ಹೆಸರು ಬಂದಿದೆ, ಮುಚ್ಚಿಡುವ ಪ್ರಶ್ನೆ ಇಲ್ಲ. ಬಿಜೆಪಿಯವರ ಆರೋಪ ಬಗ್ಗೆ ನಮಗೇನೂ ತಿಳಿಯುತ್ತಿಲ್ಲ. ಬಿಜೆಪಿಯವರು ಇದೊಂದೇ ಅಂತಲ್ಲ ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ ಎಂದರು. ಬಿಜೆಪಿ ಸತ್ಯಶೋಧನಾ ಸಮಿತಿ ಬಳಿ ಮಾಹಿತಿ ಇದ್ದರೆ ನಮ್ಮ ಜೊತೆ ಹಂಚಿಕೊಳ್ಳಲಿ ಎಂದರು.