ಭೋಪಾಲ್: ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ ಗಂಡು ಚೀತಾ ಸೂರಜ್ ಸಾವನ್ನಪ್ಪಿದೆ. ಈ ಉದ್ಯಾನದಲ್ಲಿ ಸುಮಾರು 4 ತಿಂಗಳುಗಳಲ್ಲಿ ಸಾವನ್ನಪ್ಪಿರುವ 8ನೇ ಚೀತಾ ಇದಾಗಿದೆ
ಇಂದು ಮುಂಜಾನೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಆಫ್ರಿಕಾದಿಂದ ತರಲಾಗಿದ್ದ ಚೀತಾ ಸೂರಜ್ ಶವವಾಗಿ ಪತ್ತೆಯಾಗಿದೆ. ಸೂರಜ್ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರವಷ್ಟೇ ಮತ್ತೊಂದು ಗಂಡು ಚೀತಾ ತೇಜಸ್ ಶವವಾಗಿ ಪತ್ತೆಯಾಗಿತ್ತು. ಕೆಲ ದಿನಗಳ ಹಿಂದೆ ಹೆಣ್ಣು ಚೀತಾದೊಂದಿಗೆ ಕಾದಾಟ ನಡೆಸಿದ್ದು, ಬಳಿಕ ಅದು ಚೇತರಿಸಿಕೊಳ್ಳಲು ಸಾಧ್ಯವಾಗದೇ ಸಾವನ್ನಪ್ಪಿದೆ ಎಂಬುದು ಶವಪರೀಕ್ಷೆಯಲ್ಲಿ ಬಹಿರಂಗವಾಗಿದೆ.
75 ವರ್ಷಗಳ ಬಳಿಕ ಮೊದಲ ಬಾರಿ ಭಾರತಕ್ಕೆ ಬಂದ ಚೀತಾಗಳಲ್ಲಿ ಮೊದಲನೆಯದು ಮಾರ್ಚ್ 27ರಂದು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಹೆಣ್ಣು ಚೀತಾ ಸಾಶಾ ಮೂತ್ರಪಿಂಡದ ಕಾಯಿಲೆಯಿಂದ ಬಳಲಿ ಸಾವನ್ನಪ್ಪಿತ್ತು. ಅದೇ ಸಮಯದಲ್ಲಿ ಸಿಯಾಯಾ ಎಂಬ ಚೀತಾ 4 ಮರಿಗಳಿಗೆ ಜನ್ಮ ನೀಡಿತ್ತು. ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಗಂಡು ಚೀತಾ ಉದಯ್ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪಿತು. ಮೇ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದ ದಕ್ಷ ಎಂಬ ಹೆಣ್ಣು ಚೀತಾ 2 ಗಂಡು ಚೀತಾಗಳೊಂದಿಗೆ ಕಾದಾಟ ನಡೆಸಿ ಸಾವನ್ನಪ್ಪಿತು