ಹಾವೇರಿ: ಮುಂಗಾರು ಆರಂಭವಾಗಿ ಸಾಕಷ್ಟು ದಿನ ಕಳೆದಿದ್ದರು ಸರಿಯಾದ ಮಳೆ ಬರದೆ ಜನ ಕಂಗಲಾಗಿದ್ದಾರೆ. ಅದರಲ್ಲೂ ರೈತರು ನಿತ್ಯವೂ ಆಕಾಶದತ್ತ ಮುಖ ಮಾಡಿ ಮಳೆಗಾಗಿ ಕೈ ಮುಗಿಯುತ್ತಿದ್ದ ಮಳೆಯ ಅಭಾವದಿಂದಾಗಿ ಕೃಷಿ ಚಟುವಟಿಕೆಗಳು ಹಿನ್ನಡೆ ಅನುಭವಿಸುತ್ತಿವೆ. ಸದ್ಯ ಮಳೆಯಿಂದಾಗಿ ಉತ್ತರ ಕರ್ನಾಟಕದ ಪ್ರಮುಖ ಜಾನುವಾರು ಮಾರುಕಟ್ಟೆಗಳಲ್ಲಿ ಹಾವೇರಿ ಜಾನುವಾರು ಮಾರುಕಟ್ಟೆಗೂ ಮಳೆಯ ಕೊರತೆ ಕಾಣಿಸಿಕೊಂಡಿದೆ.
ಉತ್ತರ ಕರ್ನಾಟಕದ ಪ್ರಮುಖ ಜಾನುವಾರು ಮಾರುಕಟ್ಟೆಗಳಲ್ಲಿ ಹಾವೇರಿ ಜಾನುವಾರು ಮಾರುಕಟ್ಟೆಯೂ ಒಂದು. ಇಲ್ಲಿ ರಾಜ್ಯ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಿಂದ ಎತ್ತುಗಳ ಮಾರಾಟಕ್ಕೆ ರೈತರು ಆಗಮಿಸುತ್ತಾರೆ. ಪ್ರತಿ ವರ್ಷ ಜೂನ್ ಹಾಗೂ ಜುಲೈ ತಿಂಗಳು ಬಂದರೆ ಜಾನುವಾರು ಮಾರುಕಟ್ಟೆ ದನಗಳಿಂದ ತುಂಬಿರುತ್ತಿತ್ತು. ಆದರೆ, ಪ್ರಸ್ತುತ ವರ್ಷ ಹಾವೇರಿ ಜಾನುವಾರು ಮಾರುಕಟ್ಟೆ ದನಗಳ ಕೊರತೆ ಉಂಟಾಗಿದೆ.
ಜಿಲ್ಲೆಗೆ ಮುಂಗಾರು ಮಳೆ ಆಗದೇ ಇರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಒಂದೆಡೆ ಬಿತ್ತನೆ ಮಾಡಬೇಕಿದ್ದ ರೈತರು ಸಮರ್ಪಕ ಮಳೆಯಿಲ್ಲದ ಕಾರಣ ಬಿತ್ತನೆಯೂ ಮುಂದೂಡಿದ್ದಾರೆ. ಹಣ ನೀಡಿ ತಂದ ಬಿತ್ತನೆ ಬೀಜ ಮತ್ತು ಗೊಬ್ಬರ ರೈತರ ಮನೆಯಲ್ಲಿದೆ. ಇದ್ದ ಹಣವನ್ನೆಲ್ಲ ಬಿತ್ತನೆ ಬೀಜ, ಗೊಬ್ಬರಕ್ಕೆ ರೈತರು ಖರ್ಚು ಮಾಡಿದ್ದಾರೆ. ಎತ್ತು ಆಕಳುಗಳಿಗೆ ಸಮರ್ಪಕ ಮೇವೂ ಕೂಡ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಕೂಡಾ ಎದುರಾಗಿದೆ.