ಕಾರವಾರ ;- ಮಳೆ ಕೊರತೆ ಹಿನ್ನೆಲೆ ಹಾಗೂ ತಾಪಮಾನ ಹೆಚ್ಚಳದಿಂದಾಗಿ ಬೆಳೆಗಳ ಇಳುವರಿ ಕುಂಠಿತಗೊಂಡು ಬಹುತೇಕ ತರಕಾರಿ, ಹಣ್ಣು ಹಾಗೂ ಸೊಪ್ಪಿನ ಬೆಲೆ ದುಪ್ಪಟ್ಟಾಗಿದೆ. ಮಾತ್ರವಲ್ಲದೆ ಟೊಮೆಟೊ ಬೆಲೆ ಶತಕ ಬಾರಿಸಿದ್ದು, ಇದೀಗ ಸಾಮಾನ್ಯ ಜನರು ಟೊಮೆಟೊ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ.
ಬಯಲು ಸೀಮೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಸುಳಿವೇ ಇಲ್ಲದಿರುವುದರಿಂದ ತರಕಾರಿ ಇಳುವರಿ ಕುಂಠಿತವಾಗಿ, ಮಾರುಕಟ್ಟೆಗೆ ತರಕಾರಿ ಪೂರೈಕೆಯಾಗುತ್ತಿಲ್ಲ. ಇದರಿಂದ ತರಕಾರಿ ಬೆಲೆಗಳು ಗಗನಕ್ಕೇರಿವೆ.
ಮಾರುಕಟ್ಟೆಗಳಲ್ಲಿ ಕಳೆದ ವಾರ 80 ರೂ. ಇದ್ದ ಬೀನ್ಸ್ ಈಗ 120 ರಿಂದ 150 ರೂಪಾಯಿಗೆ ಏರಿದೆ. ಅದೇ ರೀತಿ ಟೊಮೆಟೊ 50 ರಿಂದ 100 ರೂ.ಗೆ ತಲುಪಿದೆ. ಬೆಂಡೆಕಾಯಿ 30 ರಿಂದ 80ಕ್ಕೆ, ಎಲೆಕೋಸು 10 ರಿಂದ 30ಕ್ಕೆ, ಕ್ಯಾರೆಟ್ 40 ರಿಂದ 60ಕ್ಕೆ, ಮೆಣಸು 50 ರಿಂದ 80ಕ್ಕೆ ಏರಿಕೆಯಾಗಿದೆ. ಇನ್ನು ಸೊಪ್ಪುಗಳ ಬೆಲೆಯೂ ಹೆಚ್ಚಾಗಿದ್ದು, ಕೊತ್ತಂಬರಿ ಕಟ್ಟಿನ ದರ 50ರೂ. ಪಾಲಕ್ 50ರೂ.ಗೆ 5ಕಟ್ಟು, ಹರಿವೆ 50 ರೂ .ಗೆ 3ಕಟ್ಟು, ಮೆಂತೆ 50ರೂ .ಗೆ 4 ಕಟ್ಟಿನಂತೆ ಮಾರಾಟ ಮಾಡಲಾಗುತ್ತಿದೆ.
ಇದಲ್ಲದೆ ಹಣ್ಣಿನ ದರದಲ್ಲಿಯೂ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 180ರೂ ಇದ್ದ ಸೇಬು ಇದೀಗ 240 ರಿಂದ 260 ರೂಗೆ ಮಾರಾಟ ಮಾಡಲಾಗುತ್ತಿದೆ. ದಾಂಳಿಂಬೆ 100 ರೂ. ನಿಂದ 180 ರೂ. ಗೆ, ಕಿತ್ತಳೆ 100 ರೂ. ನಿಂದ 120 ರೂ.ಗೆ ಏರಿಕೆಯಾಗಿದೆ. ಆದರೆ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 10 ರಿಂದ 100 ರೂ. ವರೆಗೆ ಹಣ್ಣು ಹಾಗೂ ತರಕಾರಿಗಳ ಬೆಲೆ ಏರಿಕೆಯಾಗಿದೆ. ಇದರಿಂದ ಕಾರವಾರದ ಭಾನುವಾರದ ಸಂತೆ ಮಾರುಕಟ್ಟೆಯಲ್ಲಿ ಬಹುತೇಕ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.