ಭಾರೀ ಮಳೆಗೆ ಮಂಗಳೂರು ನಗರದ ಪಂಪ್ವೆಲ್ ಜಲಾವೃತ

ಮಂಗಳೂರು: ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಸಂಜೆವರೆಗೂ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಬಳಿಕ ಭಾರೀ ಪ್ರಮಾಣದಲ್ಲಿ ಸುರಿದಿದೆ. ಮಂಗಳೂರು ನಗರ (Rain in Mangaluru) ಸೇರಿ ಜಿಲ್ಲಾದ್ಯಂತ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಹರಿಯಿತು. ನಗರದೊಳಗಿನ ಪ್ರಮುಖ ರಸ್ತೆಗಳು ಕೆಲ ಕಾಲ ಜಲಾವೃತವಾಗಿ ಸಂಚಾರಕ್ಕೆ ತೊಡಕಾಯಿತು.
ಮುಂಗಾರು ಮಳೆ ಎಂಟ್ರಿ ಕೊಟ್ರೂ ರಾಜ್ಯದ ಕರಾವಳಿಯಲ್ಲಿ ಸರಿಯಾಗಿ ಮಳೆ ಸುರಿದಿಲ್ಲ. ಕೆಲ ದಿನಗಳಿಂದ ಆಗ್ಗಾಗ್ಗೆ ಬರುತ್ತಿದ್ದ ಮಳೆ ಮತ್ತೆ ಕಣ್ಮರೆಯಾಗಿ ಬಿಸಿಲಿನ ವಾತಾವರಣವಿತ್ತು. ಜುಲೈ 3 ರಿಂದ 5 ವರೆಗೂ ಕರಾವಳಿಯಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ (Weather Department) ಸೂಚನೆ ನೀಡಿದೆ. ಸೋಮವಾರ ಸಂಜೆ ವೇಳೆಗೆ ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರೀ ಮಳೆ ಜನ ಜೀವನವನ್ನೇ ಅಸ್ತವ್ಯಸ್ತವನ್ನಾಗಿಸಿತ್ತು. ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ನಗರದ ಹೆಬ್ಬಾಗಿಲು ಎಂದೆನಿಸಿಕೊಂಡಿರುವ ಪಂಪ್ವೆಲ್ ಸರ್ಕಲ್ ನಲ್ಲಿ (Pumpwell Circle) ಪಕ್ಕದ ಚರಂಡಿ ತುಂಬಿ ರಸ್ತೆ ಜಲಾವೃತವಾಗಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಂತಿದ್ದವು. ಪಂಪ್ವೆಲ್ ಸರ್ಕಲ್ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಫ್ಲೈಓವರ್ ಆದಂದಿನಿಂದ ಈ ಸಮಸ್ಯೆ ಇದೆ. ಫ್ಲೈಓವರ್ನ ಅಡಿ ಭಾಗದಲ್ಲಿ ನಗರಕ್ಕೆ ಹೋಗೋ ವಾಹನಗಳಿಗೆ ರಸ್ತೆಯಿದ್ದು ಅಲ್ಲೇ ಸಮೀಪದಲ್ಲಿ ಚರಂಡಿ ಇದೆ.
ಈ ಚರಂಡಿಯ ಒಂದು ಭಾಗ ಎತ್ತರವಿದ್ದು ಇನ್ನೊಂದು ಭಾಗ ಕೆಳಗಿದೆ. ಹೀಗಾಗಿ ನೀರು ಹರಿದು ಹೋಗಬೇಕಿದ್ದ ಭಾಗದಲ್ಲಿ ಎತ್ತರ ಇರೋದ್ರಿಂದ ನೀರು ರಸ್ತೆಗೆ ನುಗ್ಗಿ ಬರುತ್ತದೆ. ಕಳೆದ ಐದಾರು ವರ್ಷದಿಂದ ಈ ಸಮಸ್ಯೆ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕೂತಿದ್ದಾರೆ. ಹೀಗಾಗಿ ಈ ಸಮಸ್ಯೆ ಪ್ರತೀ ವರ್ಷದ ಮೊದಲ ಮಳೆಗೆ ಇದ್ದೇ ಇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನ ಆಗಿಲ್ಲ.
ಈ ರೀತಿಯ ಸಮಸ್ಯೆ ನಗರದ ಹಲವು ತಗ್ಗು ಪ್ರದೇಶದಲ್ಲಿ ಇದೆ. ಕೊಟ್ಟಾರ ಚೌಕಿ, ಮಾಲೆಮಾರ್ ಸೇರಿದಂತೆ ಹಲವು ಕಡೆ ರಸ್ತೆಯಲ್ಲಿ ನೀರು ತುಂಬಿತ್ತು. ನಗರದಲ್ಲಿ ಮಾತ್ರವಲ್ಲದೆ ಜಿಲ್ಲೆಯ ಬಂಟ್ವಾಳ, ಪುತ್ತೂರು ,ಬೆಳ್ತಂಗಡಿಯಲ್ಲೂ ಭಾರೀ ಮಳೆಯಾಗಿದೆ. ಇಂದು ಮತ್ತು ನಾಳೆಯೂ ಭಾರೀ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದ್ದು ಜನ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತವೂ ಮನವಿ ಮಾಡಿದೆ.

Loading

Leave a Reply

Your email address will not be published. Required fields are marked *