ಬಾಲಿವುಡ್ ಬ್ಯೂಟಿ ನಟಿ ಕಂಗನಾ ರಣಾವತ್ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ತಮಗೆ ಅನಿಸಿದ್ದನ್ನು ನೇರಾ ನೇರವಾಗಿ ಹೇಳಿ ಅದೆಷ್ಟೋ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ನಟಿ ಬಾಲಿವುಡ್ ನ ಮೂವೀ ಮಾಫಿಯಾದ ವಿರುದ್ಧ ಮತ್ತೊಂದು ಗರಂ ಆಗಿದ್ದಾರೆ.
ಕಂಗನಾ ರಣಾವತ್ ನಿರ್ಮಾಣದ ‘ಟೀಕು ವೆಡ್ಸ್ ಶೇರು’ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದೆ. ಸಿನಿಮಾವನ್ನೂ ನೋಡದೇ ಕೆಲವರು ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆ ಬರೆಯುತ್ತಿದ್ದು, ರೇಟಿಂಗ್ ಕೊಡುವ ವಿಚಾರದಲ್ಲೂ ಸಿನಿಮಾ ಸೋಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರಂತೆ. ಇದೆಲ್ಲವನ್ನೂ ಬಾಲಿವುಡ್ ಮೂವೀ ಮಾಫಿಯಾ ಮಾಡಿಸುತ್ತಿದೆ ಎಂದು ಕಂಗನಾ ಆಕ್ರೋಶ ಹೊರ ಹಾಕಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲಿ ಮೂವೀ ಮಾಫಿಯಾ ಇದ್ದು, ಅದು ಬೇರೆ ಚಿತ್ರಗಳನ್ನು ಬೆಳೆಯುವುದಕ್ಕೆ ಬಿಡುವುದಿಲ್ಲ ಎಂದು ಈ ಹಿಂದೆ ಕಂಗನಾ ಆರೋಪಿಸಿದ್ದರು. ಈ ಭಾರಿ ಮತ್ತೆ ಬಾಲಿವುಡ್ ಮೂವಿ ಮಾಫಿಯಾದ ಬಗ್ಗೆ ಮಾತನಾಡಿರುವ ನಟಿ,ನೀವು ನನ್ನನ್ನು ಎಷ್ಟೇ ತುಳಿದರು ಮತ್ತೆ ನಾನು ಎದ್ದು ನಿಲ್ಲುತ್ತೇನೆ ಎಂದಿದ್ದಾರೆ.
‘ಟೀಕು ವೆಡ್ಸ್ ಶೇರು’ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ಧಿಕಿ ಮತ್ತು ಅವನೀತ್ ಕೌರ್ ಅವರು ಕಿಸ್ ಮಾಡುವ ದೃಶ್ಯ ಇದೆ. ನವಾಜುದ್ದೀನ್ ಸಿದ್ಧಿಕಿಗೆ 49 ವರ್ಷವಾಗಿದ್ದು ನಟಿ ಅವನೀತ್ ಕೌರ್ ಗೆ ಕೇವಲ 21 ವರ್ಷ. ಇಷ್ಟು ಏಜ್ ಗ್ಯಾಪ್ ಇರುವ ಕಲಾವಿದರು ಜೋಡಿಯಾಗಿ ನಟಿಸಿದ್ದು ಸರಿಯಲ್ಲ ಎಂಬುದು ಕೆಲವರ ತಕರಾರು. ಆದರೆ ಇಂಥ ಟೀಕೆಗಳಿಗೆ ಪ್ರೇಕ್ಷಕರು ಕಿವಿ ಕೊಡಬಾರದು ಎಂದು ಕಂಗನಾ ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಂಗನಾ ಈ ಬಗ್ಗೆ ಬರೆದುಕೊಂಡಿದ್ದಾರೆ.
‘ವಯಸ್ಸಿನ ವಿಚಾರ ಇಟ್ಟುಕೊಂಡು ಮೂವೀ ಮಾಫಿಯಾದವರು ಮಾಡುತ್ತಿರುವ ವಿವಾದದಿಂದ ಏನೂ ಲಾಭ ಇಲ್ಲ’ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ‘ನನ್ನ ಸಿನಿಮಾವನ್ನು ಹಾಳು ಮಾಡಲು ಮೂವೀ ಮಾಫಿಯಾದವರು ಪ್ರಯತ್ನಿಸುತ್ತಿದ್ದಾರೆ. ಚಿತ್ರ ರಿಲೀಸ್ ಆಗುವುದಕ್ಕೂ ಮುನ್ನವೇ ಸುಳ್ಳು ವಿಮರ್ಶೆಗಳು ಮತ್ತು ಅಪಪ್ರಚಾರ ನಡೆಯುತ್ತಿದೆ. ಈಗ ನಮ್ಮ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ನೀವೇ ಸ್ವತಃ ನೋಡಿ. ನಿಮ್ಮ ಸ್ನೇಹಿತರ ಅಭಿಪ್ರಾಯ ಕೇಳಿ. ಪೇಯ್ಡ್ ವಿಮರ್ಶೆಗಳು ಮತ್ತು ನಕಲಿ ಟ್ರೆಂಡ್ಗಳನ್ನು ನಂಬಬೇಡಿ’ ಎಂದು ಕಂಗನಾ ರಣಾವತ್ ಹೇಳಿದ್ದಾರೆ.