ವಿಜಯಪುರ : ಗ್ಯಾರಂಟಿ ಮೂಲಕ ಜನರಿಗೆ ಮೋಸ ಮಾಡಿ, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡಲು ಸಾಧ್ಯವೇ ಇಲ್ಲ, ಡಿಸೈಲ್ ಇಲ್ಲದೇ ಬಸ್ಗಳು ನಿಲ್ಲುವುದು ಗ್ಯಾರಂಟಿ, ವಿದ್ಯುತ್ ಕ್ಷಾಮ, ನೀರಿನ ಕ್ಷಾಮ ರಾಜ್ಯದಲ್ಲಿ ತಲೆದೂರುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ವಿಜಯಪುರದ ಶ್ರೀ ಗುರು ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈ ಗ್ಯಾರಂಟಿ, ಆ ಗ್ಯಾರಂಟಿ ಎಂದು ಹೇಳಿ ನೀರಾವರಿಯ ವಿಷಯವನ್ನೇ ಡೈವರ್ಟ್ ಮಾಡುತ್ತಿದ್ದಾರೆ, ವಿಜಯಪುರ ಜಿಲ್ಲೆಗೆ ಬೇಕಾದ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸುತ್ತಿಲ್ಲ, ಮುಂದೊಂದು ದಿನ ನೀರಿಗೂ ಸಹ ದುಸ್ತರ ಬರುವಂತಹ ವಾತಾವರಣವನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದೆ ಎಂದರು.
ಗುತ್ತಿ ಬಸವಣ್ಣ ಯೋಜನೆ ಅನುಷ್ಠಾನ ಮಾಡುವಾಗ ಅನೇಕ ವಿಘ್ನ ಎದುರಾದವು, ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಅನೇಕರು ಹೆದರಿಸದರು, ಆದರೆ ವಿಜಯಪುರ ಜಿಲ್ಲೆಯ ಜನತೆಗೆ ನ್ಯಾಯ ಒದಗಿಸಲು ನಾನು ಜೈಲಿಗೆ ಹೋಗಲು ಸಿದ್ಧ, ನೇಣಿಗೆ ಏರಲು ಸಿದ್ಧ ಎಂದು ಗುತ್ತಿ ಬಸವಣ್ಣ ಯೋಜನೆ ಅನುಷ್ಠಾನಕ್ಕೆ ಮುಂದಾದೆ ಎಂದು ಸ್ಮರಿಸಿಕೊಂಡರು.
ರೈತರು ಕಳೆದುಕೊಂಡ ಭೂಮಿಗೆ ದರವನ್ನು ನಂತರ ಬಂದ ಕಾಂಗ್ರೆಸ್ ಸರ್ಕಾರ ನಿಗದಿಪಡಿಸಲಿಲ್ಲ, ಏಕರೂಪದ ದರವನ್ನು ರೈತರಿಗೆ ನೀಡಲೇ ಇಲ್ಲ, ಈ ಏಕರೂಪದ ದರವನ್ನು ನೀಡಲು ಪುನ: ನಮ್ಮ ಸರ್ಕಾರವೇ ಬರಬೇಕಾಯಿತು ಎಂದರು