ಹಾವೇರಿ: ರಾಜ್ಯದಲ್ಲಿ ರೈತರನ್ನು ಮದುವೆಯಾಗಲು ವಧುವೇ ಸಿಗುತ್ತಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಸಾಕಷ್ಟು ರೈತರು ಹಳ್ಳಿಗಳನ್ನು ತೊರೆದು ಉದ್ಯೋಗ ಅರಸಿ ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಇದೀಗ ರೈತರೊಬ್ಬರು ಮದುವೆಯಾಗಲು ಹೆಣ್ಣು ಸಿಗಲಿಲ್ಲ ಎಂಬ ಕಾರಣಕ್ಕೆ ಮನ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದೆ..
ಮಂಜುನಾಥ ನಾಗನೂರು ಆತ್ಮಹತ್ಯೆಗೆ ಶರಣಾದ ರೈತ. ಮಂಜುನಾಥನಿಗೆ ಮದುವೆ ಮಾಡಲು ಕುಟುಂಬಸ್ಥರು ಕಳೆದ ಏಳೆಂಟು ವರ್ಷಗಳಿಂದ ಹುಡುಗಿಯನ್ನು ಹುಡುಕುತ್ತಿದ್ದರಂತೆ. ಆದರೆ, ಯಾರೊಬ್ಬರೂ ಮದುವೆಗೆ ಕನ್ಯೆ ಕೊಟ್ಟಿರಲಿಲ್ಲ. ನನ್ನಿಂದ ತಂದೆ ತಾಯಿಗೆ ತೊಂದರೆ ಎಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಂಜುನಾಥ್ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗಿದೆ.
ಜೂ. 15ರಂದು ಜಮೀನಿನಲ್ಲಿ ವಿಷ ಸೇವಿಸಿದ್ದು, ವಿಷಯ ತಿಳಿದ ತಕ್ಷಣವೇ ಪೋಷಕರು ಹಾಗೂ ಗ್ರಾಮಸ್ಥರು ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.