ಕೊಪ್ಪಳ: ಕಾಸರಗೋಡಿನ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕರ ನೇಮಕ ಮಾಡಿದ ವಿಚಾರವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕನ್ನಡ ಶಿಕ್ಷಕರ ನೇಮಕ ಮಾಡುವಂತೆ ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಕಾಸರಗೋಡು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಆದರೆ ಮತ್ತೆ ಅದೇ ಮಲಯಾಳಿ ಶಿಕ್ಷಕಿ ಕನ್ನಡ ಪಾಠ ಮಾಡಲು ಬಂದಿದ್ದಾರೆ. ಅವರು ಯಾರ ಒತ್ತಡದ ಮೇಲೆ ಕನ್ನಡ ಬೋಧನೆಗೆ ಬಂದಿದ್ದಾರೋ ಗೊತ್ತಿಲ್ಲ. ನಾಳೆ ಸಿಎಂ ಸಿದ್ದರಾಮಯ್ಯ, ಕೇರಳ ಶಿಕ್ಷಣ ಸಚಿವರ ಜೊತೆ ಮಾತನಾಡುತ್ತೇನೆ. ಕನ್ನಡ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರನ್ನು ನೇಮಿಸಲು ಕ್ರಮಕೈಗೊಳ್ಳುವೆ ಎಂದರು.