ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ(ಮೈಶುಗರ್) 2023-23ನೇ ಸಾಲಿನ ಕಬ್ಬು ಅರೆಯುವಿಕೆ ಕಾರ್ಯವನ್ನು ಜೂನ್ 30ರಿಂದ ಆರಂಭಿಸಲಾಗುವುದು. ಕಬ್ಬು ಪೂರೈಸಿದರೆ ರೈತರಿಗೆ ನಿಯಮದಂತೆ 14 ದಿನಗಳಿಗೊಮ್ಮೆ ಹಣ ಪಾವತಿಸಲಾಗುವುದು ಎಂದು ಮೈಶುಗರ್ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ್ ಚನ್ನಪ್ಪಗೌಡ ಪಾಟೀಲ್ ತಿಳಿಸಿದರು.
‘‘ಕಬ್ಬು ಅರೆಯಲು ಕಾರ್ಖಾನೆಯಲ್ಲಿ ಎಲ್ಲ ರೀತಿಯಿಂದಲೂ ಸರ್ವಸನ್ನದ್ಧವಾಗಿದೆ. ಯಾವುದೇ ತಾಂತ್ರಿಕ ದೋಷಗಳಿಲ್ಲ. ಎಲ್ಲ ಯಂತ್ರೋಪಕರಣಗಳನ್ನು ದುರಸ್ತಿ, ಓವರ್ಆಯಿಲ್ ಮಾಡಲಾಗಿದೆ. ಕಬ್ಬು ಕಟಾವು ಕಾರ್ಮಿಕರ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಕಬ್ಬು ಸಾಗಾಣಿಕೆಗೆ, ಟ್ರ್ಯಾಕ್ಟರ್, ಲಾರಿಗಳನ್ನು ಗೊತ್ತುಪಡಿಸಲಾಗಿದೆ,’’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಕಬ್ಬು ಕಟಾವು ಮಾಡುವವರು, ಸಾಗಣೆದಾರರಿಗೆ ವಾರಕ್ಕೊಮ್ಮೆ ಹಣ ಪಾವತಿಸಲಾಗುವುದು. ಕಳೆದ ವರ್ಷ 12 ತಾಸುಗಳ ಕಾಲ ಕಾರ್ಖಾನೆಯನ್ನು ನಿರಂತರ ಚಾಲನೆ ಮಾಡಿ 1800 ಟನ್ ಕಬ್ಬು ಅರೆದು ಪರಿಶೀಲನೆ ಮಾಡಲಾಗಿದೆ. ಹೀಗಾಗಿ ಈ ವರ್ಷ ಕಾರ್ಖಾನೆಯು ನಿತ್ಯ 5000 ಟನ್ ಕಬ್ಬು ಅರೆಯುವ ಸಾಮರ್ಥ್ಯವಿದ್ದರೂ ಪ್ರತಿದಿನ 3000 ರಿಂದ 3500 ಟನ್ ಕಬ್ಬು ಅರೆಯಲು ಗುರಿ ಹೊಂದಲಾಗಿದೆ,’’ ಎಂದರು.