ಚಿತ್ರದುರ್ಗ: ಮುಂಗಾರಿನ ಮುಖ್ಯ ಮಳೆಗಳು ಸಂಪೂರ್ಣ ವಿಫಲವಾಗಿದ್ದರಿಂದ ಚಿಂತೆಗೀಡಾಗಿದ್ದ ರೈತ ಸಮುದಾಯಕ್ಕೆ ಸಂಜೆ ಗುಡುಗು-ಸಿಡಿಲಬ್ಬರದೊಂದಿಗೆ ಸುರಿದ ಹದವಾದ ಮಳೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮ ಸೇರಿ ಸುತ್ತಲಿನ ಗ್ರಾಮಗಳ ರೈತರಲ್ಲಿ ಸಂತಸ ಮೂಡಿಸಿದೆ. ಗುಡುಗು-ಸಿಡಿಲಿನ ಅಬ್ಬರಕ್ಕೆ ಜನರು ಕೆಲಕಾಲ ಬೆಚ್ಚಿದರು. ಚಿಕ್ಕಜಾಜೂರು ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ಹೊತ್ತಿ ಉರಿದು ಆತಂಕ ಮೂಡಿಸಿತು. ಒಂದು ಗಂಟೆ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬಹಳ ದಿನಗಳ ನಂತರ ಸುರಿದ ಮಳೆಯಿಂದ ಕೊಳಚೆ, ತ್ಯಾಜ್ಯದಿಂದ ಕೂಡಿದ್ದ ಚರಂಡಿ ನೀರು ಅನೇಕ ಕಡೆ ರಸ್ತೆಗೆ ಹರಿದು ಸಂಚಾರಕ್ಕೆ ಅಡಚಣೆಯಾಯಿತು. ಮರದ ಬಳಿಯ ವಿದ್ಯುತ್ ತಂತಿಗೂ ಬೆಂಕಿ ತಗುಲಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಹಲವು ಮನೆಗಳಲ್ಲಿ ಟಿವಿ, ರೆಫ್ರಿಜರೇಟರ್ಗಳಿಗೆ ಹಾನಿಯಾಗಿದೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.