ನವದೆಹಲಿ: ದೇಶದ ಗುಪ್ತಚರ ಸಂಸ್ಥೆ ‘ರಾ’ಗೆ (RAW) ನೂತನ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ರವಿ ಸಿನ್ಹಾ (Ravi Sinha) ಅವರನ್ನು ನೇಮಿಸಲಾಗಿದೆ. ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (Research and Analysis Wing) ಪ್ರಸ್ತುತ ಮುಖ್ಯಸ್ಥ ಸಮಂತ್ ಕುಮಾರ್ ಗೋಯೆಲ್ (Samant Goel) ಅವರ ಅಧಿಕಾರಾವಧಿ ಇದೇ ಜೂನ್ 30 ರಂದು ಕೊನೆಗೊಳ್ಳಲಿದೆ.
ಬಳಿಕ ರವಿ ಸಿನ್ಹಾ 2 ವರ್ಷಗಳ ಕಾಲ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಿನ್ಹಾ ಅವರು ಛತ್ತೀಸ್‌ಗಢ ಕೇಡರ್‌ನ 1988ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಏಜೆನ್ಸಿಯ ಎರಡನೇ ಕಮಾಂಡ್ ಆಗಿದ್ದಾರೆ. ಇವರು ಕಳೆದ 7 ವರ್ಷಗಳಿಂದ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿದ್ದರು. ರವಿ ಸಿನ್ಹಾ ತಮ್ಮ ಕಾರ್ಯತಂತ್ರ ಹಾಗೂ ಬೇಹುಗಾರಿಕಾ ಕೌಶಲ್ಯಗಳಿಗೆ ಹೆಸರಾಗಿದ್ದು, ಈಗ ರಾ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.
ಪ್ರಸ್ತುತ ರಾ ಮುಖ್ಯಸ್ಥ, ಪಂಜಾಬ್ ಕೇಡರ್‌ನ 1984ರ ಬ್ಯಾಚ್ ಐಪಿಎಸ್ ಅಧಿಕಾರಿ ಸಮಂತ್ ಗೋಯೆಲ್ ತಮ್ಮ ಅಧಿಕಾರಾವಧಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2001ರಲ್ಲಿ ಸಂಸ್ಥೆಗೆ ಸೇರಿದ ಇವರು 2019ರಲ್ಲಿ ಸಂಸ್ಥೆಯ ಮುಖ್ಯಸ್ಥರಾದರು. ಇವರ ಅಧಿಕಾರಾವಧಿಯನ್ನು 2 ಬಾರಿ ವಿಸ್ತರಿಸಿದ್ದು, 4 ವರ್ಷಗಳ ಕಾಲ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.