ಜೂನ್ 20ಕ್ಕೆ ರಾಜ್ಯಾದ್ಯಂತ ಕಾಂಗ್ರೆಸ್ ನಿಂದ ಪ್ರತಿಭಟನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಯೋಜನೆ ಅನ್ನಭಾಗ್ಯ ಜಾರಿಗೆ ಅಗತ್ಯ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರ ಅವಕಾಶ ನಿರಾಕರಿಸಿರುವುದು ಬಿಜೆಪಿಯ ದ್ವೇಷ ರಾಜಕಾರಣ ಹಾಗೂ ಬಡವರ ವಿರೋಧಿ ನೀತಿಗೆ ಸಾಕ್ಷಿ.
ಇದರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಜೂನ್ 20ರಂದು ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜನರಲ್ಲಿ ಅರಿವು ಮೂಡಿಸಲಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡಲು ಬದ್ಧವಾಗಿದೆ’ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು.
“ಕಾಂಗ್ರೆಸ್ ಐದು ಗ್ಯಾರಂಟಿ ಘೋಷಿಸಿತ್ತು. ಇದರ ಜಾರಿ ಬಗ್ಗೆ ವಿರೋಧ ಪಕ್ಷದ ಸ್ನೇಹಿತರು ಅನೇಕ ಟೀಕೆ ಮಾಡುತ್ತಾ ಬಂದಿದ್ದಾರೆ. ಸರ್ಕಾರ ಬಂದ ಮೊದಲ ದಿನವೇ ಮೊದಲ ಆದೇಶ ಹೊರಡಿಸಿ ನಮ್ಮ ಬದ್ಧತೆ ಪ್ರದರ್ಶಿಸಿದ್ದೇವೆ. ಎರಡನೇ ಸಂಪುಟ ಸಭೆಯಲ್ಲಿ ಈ ಯೋಜನೆ ಜಾರಿ ಸಮಯ ನಿರ್ಧರಿಸಿದ್ದೇವೆ. ವಿರೋಧ ಪಕ್ಷಗಳ ಟೀಕೆಗೆ ನಾವು ಉತ್ತರ ನೀಡುವುದಿಲ್ಲ. ಟೀಕೆ ಸಾಯುತ್ತವೆ, ಕೆಲಸ ಉಳಿಯುತ್ತವೆ” ಎಂಬ ಮಾತನ್ನು ನಾವು ನಂಬಿದ್ದೇವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಸೋತರೆ ಕೇಂದ್ರ ಅನುದಾನ ಸ್ಥಗಿತ ಎಂದು ಹೇಳಿದ್ದರು. ಈಗ ಕರ್ನಾಟಕ ರಾಜ್ಯಕ್ಕೆ ಅಕ್ಕಿ ಖರೀದಿಗೆ ಅವಕಾಶ ತಪ್ಪಿಸುವ ಮೂಲಕ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಾಗಿ ಪ್ರಧಾನ ಮಂತ್ರಿಗಳು ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ಅಧ್ಯಕ್ಷರು ಮತದಾರರನ್ನು ಬೆದರಿಸಿದ್ದರು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಮಾಡಿದ್ದು, ಮುಂದಿನ ತಿಂಗಳಿಂದ ಯೋಜನೆ ಜಾರಿಗೆ ತೀರ್ಮಾನ ಮಾಡಿದ್ದೆವು. ಇದಕ್ಕಾಗಿ ಭಾರತೀಯ ಆಹಾರ ಪ್ರಾಧಿಕಾರಕ್ಕೆ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು. ಪ್ರಾಧಿಕಾರ ಕೂಡ ಜೂನ್ 12 ರಂದು ಜುಲೈ ತಿಂಗಳಲ್ಲಿ ಇ ಹರಾಜು ಮೂಲಕ ಅಕ್ಕಿ ನೀಡುವುದಾಗಿ ಅನುಮತಿ ನೀಡಿತ್ತು. 2,08,425.750 ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಅನುಮತಿ ನೀಡುವುದಾಗಿ ಪ್ರಾಧಿಕಾರ ಪತ್ರ ಬರೆದಿತ್ತು. ಇದಾದ ಮರುದಿನ ಅಂದರೆ ಜೂನ್ 13 ರಂದು, ಗೋಧಿ ಮತ್ತು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವುದನ್ನು ತಡೆಯಲಾಗಿದೆ ಎಂದು ತಿಳಿಸಿದೆ.

Loading

Leave a Reply

Your email address will not be published. Required fields are marked *