ಬೆಂಗಳೂರು: ಬೆಂಗಳೂರು- ಹುಬ್ಬಳ್ಳಿ, ಮುಂಬೈ- ಗೋವಾ, ಪಟನಾ- ರಾಂಚಿ, ಭೋಪಾಲ್- ಇಂದೋರ್ ಮತ್ತು ಭೋಪಾಲ್- ಜಬ್ಬಲ್ಪುರ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗುತ್ತದೆ.
ಇದೇ ಮೊದಲ ಬಾರಿಗೆ ಒಂದೇ ದಿನ 5 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ.
288 ಜನರ ಸಾವಿಗೆ ಕಾರಣವಾದ ಒಡಿಶಾ ರೈಲು ದುರಂತದ ಬಳಿಕ ಮೊದಲ ಬಾರಿಗೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗುತ್ತಿದ್ದು, ದುರಂತದ ಬಳಿಕ ಮುಂಬೈ ಮತ್ತು ಗೋವಾ ನಡುವಿನ ರೈಲು ಚಾಲನೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು.
ಈಗ ಜೂನ್ 26ರಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಒಟ್ಟು 5 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ದೇಶದಲ್ಲಿ ವಂದೇ ಭಾರತ್ ರೈಲುಗಳ ಸಂಖ್ಯೆ 24ಕ್ಕೆ ಏರಿಕೆಯಾಗಲಿದೆ.
ಬೆಂಗಳೂರು ಹುಬ್ಬಳ್ಳಿ ವಂದೇ ಭಾರತ್ ರೈಲು ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಿಲ್ಲಲಿದೆ ಎಂದು ವರದಿಯಾಗಿದೆ. ಈಗಾಗಲೇ ಬೆಂಗಳೂರು-ಹುಬ್ಬಳ್ಳಿ ಮುಖ್ಯ ಮಾರ್ಗವನ್ನು ವಿದ್ಯುದ್ದೀಕರಿಸಲಾಗಿದೆ. ಇದು ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆಗಿದೆ.