ಟೀಂ ಇಂಡಿಯಾ ಸೋಲಿನ ಬಳಿಕ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಟ್ರೋಲ್

ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಆಯೋಜಿತ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಟ್ರೋಫಿಗೆದ್ದು ದಶಕ ಕಳೆದಿದೆ. ಎಂಎಸ್‌ ಧೋನಿ ಸಾರಥ್ಯದಲ್ಲಿ ಭಾರತ ತಂಡ 2013ರ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. ಇದಾದ ಬಳಿಕ ಹಲವು ಬಾರಿ ವಿವಿಧ ಟೂರ್ನಿಗಳಲ್ಲಿ ಫೈನಲ್‌ಗೆ ದಾಪುಗಾಲಿಟ್ಟರೂ ಕೂಡ ಟ್ರೋಫಿ ಎತ್ತಿಹಿಡಿಯದೆ ನಿರಾಶೆಗೊಳಗಾಗಿದೆ.

ಕೆಲ ದಿನಗಳ ಹಿಂದಷ್ಟೇ ಅಂತ್ಯಗೊಂಡ 2ನೇ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ 209 ರನ್‌ಗಳ ಹೀನಾಯ ಸೋಲುಂಡಿತು. ಈ ಮೂಲಕ ಟ್ರೋಫಿ ಬರ ನೀಗಿಸಿಕೊಳ್ಳುವ ಅತ್ಯುತ್ತಮ ಅವಕಾಶವನ್ನೂ ಕೈಚೆಲ್ಲಿತು. ಭಾರತ ತಂಡದ ಈ ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದಾರೆ.

ಕಳಪೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಕಾರಣ ಆಸ್ಟ್ರೇಲಿಯಾ ಎದುರು ಟೀಮ್ ಇಂಡಿಯಾ ಹೀನಾಯ ಸೋಲುಂಡಿತು. ಆದರೆ, ನೆಟ್ಟಿಗರ ಪ್ರಕಾರ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಈ ಸೋಲಿಗೆ ಕಾರಣವಂತೆ. ಭಾರತ ತಂಡಕ್ಕೆ ಅನುಷ್ಕಾ ಶರ್ಮಾ ದುರದೃಷ್ಟ ತಂದೊಡ್ಡಿದ್ದಾರೆ, ದಯವಿಟ್ಟು ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಬೇಡಿ ಎಂದೆಲ್ಲಾ ಟ್ರೋಲ್‌ ಮಾಡಲಾಗಿದೆ.

ಮಹತ್ವದ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಮೊದಲ ಇನಿಂಗ್ಸ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಎಸೆದ ಬೌನ್ಸರ್‌ ಎದುರು ಕ್ಯಾಚ್‌ ಔಟ್‌ ಆಗಿ ಕೇವಲ 14 ರನ್‌ ಗಳಿಸುವುದಕ್ಕೆ ಸೀಮಿತರಾದರು. ಆದರೆ, 2ನೇ ಇನಿಂಗ್ಸ್‌ನಲ್ಲಿ ತಂಡ 444 ರನ್‌ ಗುರಿ ಬೆನ್ನತ್ತಿದ್ದ ಸಂದರ್ಭದಲ್ಲಿ ದಿಟ್ಟ ಆಟವಾಡಿ 49 ರನ್‌ ಬಾರಿಸಿದ್ದರು. ಭಾರತಕ್ಕೆ ಜಯ ತಂದುಕೊಡುವ ಭರವಸೆಯಾಗಿ ಉಳಿದಿದ್ದ ಕೊಹ್ಲಿ, 5ನೇ ದಿನದಾಟದ ಆರಂಭದಲ್ಲಿ ವೇಗಿ ಸ್ಕಾಟ್‌ ಬೋಲ್ಯಾಂಡ್‌ಗೆ ವಿಕೆಟ್‌ ಒಪ್ಪಿಸಿಬಿಟ್ಟರು. ಹಳೇ ಚಾಳಿಯಂತೆ ಔಟ್‌ ಸೈಡ್‌ ಆಫ್‌ ಸ್ಟಂಪ್‌ ನೇರದಲ್ಲಿದ್ದ ಚೆಂಡನ್ನು ಕೆಣಕಿ ಸ್ಲಿಪ್‌ ವಿಭಾಗಕ್ಕೆ ಕ್ಯಾಚಿತ್ತು. ಇದರೊಂದಿಗೆ ಪಂದ್ಯದಲ್ಲಿ ಸೋಲಿನಿಂದ ಪಾರಾಗುವ ಭಾರತ ಭರವಸೆಯೂ ಕೊನೆಗೊಂಡಿತು.

ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಔಟಾದ ಪರಿ ಕಂಡ ಅನುಷ್ಕಾ ಶರ್ಮಾಅಚ್ಚರಿಗೆ ಒಳಗಾಗಿದ್ದನ್ನು ನೇರ ಪ್ರಸಾರದ ವೇಳೆ ತೋರಿಸಲಾಗಿತ್ತು. ಇದರ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾಗಳಲ್ಲಿ ಸೋಲಿಗೆ ಅನುಷ್ಕಾ ಶರ್ಮಾ ಅವರನ್ನು ದೂರಲು ನೆಟ್ಟಿಗರು ಮುಂದಾಗಿದ್ದಾರೆ. ಕೊಹ್ಲಿ ವೈಫಲ್ಯಕ್ಕೆ ಅನುಷ್ಕಾ ಅವರ ದುರದೃಷ್ಟ ಕಾರಣ ಎಂದೆಲ್ಲಾ ಹೀಯಾಳಿಸಿದ್ದಾರೆ.

Loading

Leave a Reply

Your email address will not be published. Required fields are marked *