ಭಾರತೀಯ ಚಿತ್ರರಂಗದ ದಂತಕಥೆ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡು ಬರೋಬ್ಬರಿ 32 ವರ್ಷಗಳೇ ಕಳೆದು ಹೋಗಿದೆ. ಈ ಜೋಡಿಯನ್ನು ಮತ್ತೆ ತೆರೆ ಮೇಲೆ ಒಟ್ಟಿಗೆ ನೋಡಬೇಕು ಎನ್ನೋದು ಅದೆಷ್ಟೋ ಅಭಿಮಾನಿಗಳ ಬಯಕೆಯಾಗಿದೆ. ಇದೀಗ ಈ ಸ್ಟಾರ್ ಜೋಡಿ ಮತ್ತೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಸಾಹಸಕ್ಕೆ ಕೈ ಹಾಕಿದೆ. ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ರಜನಿಯ 170ನೇ ಚಿತ್ರಕ್ಕೆ ಹಣ ಸುರಿಯುತ್ತಿದೆ. ವಿಶೇಷ ಅಂದರೆ ರಜನಿ ಜೊತೆ ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ.
ರಜನಿಕಾಂತ್- ಅಮಿತಾಭ್ ಬಚ್ಚನ್ ಭಾರತೀಯ ಚಿತ್ರರಂಗದ ಘಟಾನುಘಟಿ ನಾಯಕರು. ಈ ಇಬ್ಬರು ತಾರೆಯರು ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದವು. ರಜನಿ- ಅಮಿತಾಭ್ ಬಚ್ಚನ್ ಅಭಿನಯಕ್ಕೂ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು. ಈ ಸಿನಿಮಾಗಳ ಯಶಸ್ಸಿನ ನಂತರ ಇದೀಗ 32 ವರ್ಷದ ಬಳಿಕ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಸಾಕಷ್ಟು ಅದ್ಧೂರಿಯಾಗಿ ಮೂಡಿ ಬರಲಿರುವ ಈ ಸಿನಿಮಾ ಮುಂದಿನ ತಿಂಗಳು ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ರಜನಿ-ಅಮಿತಾಭ್ ಬಚ್ಚನ್ ನಟಿಸಲಿರುವ, ಲೈಕಾ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ‘ಜೈ ಭೀಮ್’ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ.