ಕಾರವಾರ: ಅರಬ್ಬೀ ಸಮುದ್ರದಲ್ಲಿ ಬಿಪೋರ್ ಜಾಯ್ ಚಂಡಮಾರುತ ಅಬ್ಬರ ಜೋರಾದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ರವೀಂದ್ರನಾಥ ಟ್ಯಾಗೋರ್ ಬೀಚ್ ಕಡಲ್ಕೊರೆತ ಉಂಟಾಗಿದೆ.
ಗಾಳಿಯ ರಭಸಕ್ಕೆ 3 ರಿಂದ 4 ಮೀಟರ್ ಎತ್ತರದಷ್ಟು ಅಲೆಗಳು ಏಳುತ್ತಿದ್ದು, ಕಡಲತೀರಕ್ಕೆ ಅಪ್ಪಳಿಸುತ್ತಿವೆ. ಅಲೆಗಳ ಹೊಡೆತಕ್ಕೆ ತೀರಪ್ರದೇಶದ ಮರಳು ಕೊಚ್ಚಿ ಹೋಗುತ್ತಿದೆ. ಚಂಡಮಾರುತದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಇನ್ನು ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇನ್ನು ಚಂಡಮಾರುತ ಪರಿಣಾಮ ಕರಾವಳಿಯಲ್ಲಿ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಕಡಲಕೊರೆತ ಹಿನ್ನಲೆ ಮೀನುಗಾರರು ದೋಣಿಗಳನ್ನ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಅಲೆಗಳ ಹೊಡೆತಕ್ಕೆ ಬೋಟ್ಗಳು ಸಿಲುಕದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಜಿಲ್ಲಾಡಳಿತ ಕಡಲತೀರದ ಸಮುದ್ರಕ್ಕಿಳಿಯದಂತೆ ಪ್ರವಾಸಿಗರಿಗೆ ಸೂಚಿಸಿದೆ.