ನೆಟೆ ರೋಗದ ಮೊದಲ ಕಂತಿನ 74 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ವಿಕಾಸಸೌಧದಲ್ಲಿ ಮಾತನಾಡಿದ ಅವರು, ನೆಟೆ ರೋಗದಿಂದ 2022-23ನೇ ಸಾಲಿನಲ್ಲಿ ಬೀದರ್ ಜಿಲ್ಲೆಯಲ್ಲಿ 14,495 ಹೆಕ್ಟೇರ್, ವಿಜಯಪುರ ಜಿಲ್ಲೆಯಲ್ಲಿ 20,401 ಹೆಕ್ಟೇರ್, ಕಲಬುರಗಿ ಜಿಲ್ಲೆಯಲ್ಲಿ 1,98,488 ಹೆಕ್ಟೇರ್, ಯಾದಗಿರಿ ಜಿಲ್ಲೆಯಲ್ಲಿ 10,259 ಪ್ರದೇಶದಲ್ಲಿ ತೊಗರಿ ಬೆಳೆ ಹಾನಿಯಾಗಿರುತ್ತದೆ. ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್ 10 ಸಾವಿರ ಪರಿಹಾರದಂತೆ ಗರಿಷ್ಠ ಎರಡು ಹೆಕ್ಟೇರ್‌ಗೆ ಸೀಮಿತಗೊಳಿಸಿ ಸರ್ಕಾರದಿಂದ 223 ಕೋಟಿಗಳ ಅನುದಾನ ಘೋಷಿಸಲಾಗಿದೆ. ಇದರ ಪೈಕಿ ಮೊದಲ ಹಂತದಲ್ಲಿ 1/3 ಭಾಗದಷ್ಟು, ಅಂದರೇ 74 ಕೋಟಿ ರೂಪಾಯಿ ಪರಿಹಾರ ಹಣವನ್ನು ಸಾದಿಲ್ವಾರು ನಿಧಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನೆಟೆರೋಗದಿಂದ ತೊಗರಿ ಬೆಳೆಹಾನಿಯಿಂದ ನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರದ ಹಣ ವಿತರಿಸಲಾಗುವುದು. ಉಳಿದ ಪರಿಹಾರದ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.