ಪಠ್ಯ ಪರಿಷ್ಕರಣೆ ಧಾವಂತ ನೋಡಿದರೆ ಶಿಕ್ಷಣ ಇಲಾಖೆಯನ್ನು 3ನೇ ವ್ಯಕ್ತಿ ನಿಯಂತ್ರಿಸುತ್ತಿರುವ ಅನುಮಾನ ಬರುತ್ತಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಅಧಿಕಾರಕ್ಕೆ ಬಂದು ತಿಂಗಳು ಕಳೆಯುವಷ್ಟರಲ್ಲೇ ಸಿದ್ದ ರಾಮಯ್ಯ ಸರ್ಕಾರ ಪಠ್ಯ-ಪುಸ್ತಕ ಪರಿಷ್ಕರಣೆಗೆ ಕೈ ಹಾಕಿದೆ. ಪಠ್ಯದಲ್ಲಿ ಭಾರತೀಯತೆ, ಸಂಸ್ಕ್ರತಿ ಹಾಗೂ ಇತಿಹಾಸದ ನೈಜ್ಯ ಸತ್ಯಗಳೇನು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯದಂತೆ ಮುಚ್ಚಿಡುವುದು ಸರಕಾರದ ಉದ್ದೇಶವೇ ? ಶಾಲೆಗಳಿಗೆ ಪಠ್ಯ- ಪುಸ್ತಕ ಪೂರೈಕೆಯಾದ ನಂತರ ಪರಿಷ್ಕರಣೆಯ ಹಟವೇಕೆ? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಇಲಾಖೆಯ ಇತರ ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಕ್ಕಾದರೂ ಅವಕಾಶ ಕೊಡಿ. ಅದನ್ನು ಬಿಟ್ಟು ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಕಲಿಸುವ ಪಾಠ ಯಾವುದೆಂದು ನಿರ್ಧರಿಸಿ ಎಂದು ನೀವು ಪಾಠ ಮಾಡಬೇಡಿ ಎಂದು ಹೇಳಿದ್ದಾರೆ. ನಾನು ಮೇಷ್ಟ್ರಾಗಿದ್ದೆ ಕಣ್ರಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡುವುದಕ್ಕೆ ಮುನ್ನ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಮಸ್ಯೆ ಮೊದಲು ಅರ್ಥ ಮಾಡಿಕೊಳ್ಳಿ. ಪಠ್ಯ ಪರಿಷ್ಕರಣೆ ಬಗ್ಗೆ ನಿಮಗಿರುವ ಧಾವಂತ ನೋಡಿದರೆ ಶಿಕ್ಷಣ ಇಲಾಖೆಯನ್ನು ಮೂರನೇ ವ್ಯಕ್ತಿಗಳು ನಿಯಂತ್ರಿಸುತ್ತಿರುವ ಅನುಮಾನ ಬರುತ್ತಿದೆ ಎಂದು ಹೇಳಿದ್ದಾರೆ.