ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಷರತ್ತು ವಿಧಿಸಿರುವುದಕ್ಕೆ ಎಎಪಿ ಟೀಕಿಸಿದೆ. ಈ ಸಂಬಂಧ ಬೆಂಗಳೂರಿನ ಎಎಪಿ ಕಚೇರಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ,ಜನ ವಿರೋಧಿ ಗ್ಯಾರಂಟಿಗಳನ್ನು ಕೊಡುವುದಕ್ಕಿಂತ ಸುಮ್ಮನೆ ಇರುವುದೇ ವಾಸಿ. ಅರವಿಂದ್ ಕೇಜ್ರಿವಾಲ್ ಮಾಡಿರುವ ಕೆಲಸಗಳನ್ನು ನೀವು ಕೇವಲ ವೋಟಿಗಾಗಿ ಕಾಪಿ ಮಾಡಬಹುದೇ ಹೊರತು ಜನರ ಜೀವನದಲ್ಲಿ ಬದಲಾವಣೆ ತರಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದರು. 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿ, ಇದೀಗ ಷರತ್ತುಗಳನ್ನು ವಿಧಿಸಿರುವ ಸರ್ಕಾರದ ನಡೆಯ ವಿರುದ್ಧ ಆಮ್ ಆದ್ಮಿ ಪಕ್ಷದ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.