ರಾಜಧಾನಿ ಬೆಂಗಳೂರಿನ ಹಲವೆಡೆ ನಿನ್ನೆ ವರುಣ ಅಬ್ಬರಿಸಿದ್ದಾನೆ. ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಬಸವನಗುಡಿ, ಜಯನಗರ, ವಿಧಾನಸೌಧ, ಕೋರಮಂಗಲ, ಹನುಮಂತ ನಗರ, ವಿದ್ಯಾಪೀಠ, ಕತ್ರಿಗುಪ್ಪೆ ಸೇರಿದಂತೆ ಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಇನ್ನು ಈ ಮಳೆಗೆ ರಸ್ತೆಗಳೆಲ್ಲ ಕೆರೆಯಂತಾಗಿ ಮಾರ್ಪಟ್ಟಿದ್ದು, ವಾಹನ ಸವಾರರು ಪರದಾಡಿದ್ದಾರೆ. ಈಗಾಗಲೇ ಮುಂಗಾರು ಪೂರ್ವ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಪಾ ಹಾನಿಗಳು ಸಂಭವಿಸಿವೆ. ಮತ್ತೊಂದೆಡೆ ಇದೀಗ ಮುಂಗಾರು ಮಳೆ ಪ್ರವೇಶ ಮಾಡಲಿದ್ದು, ಇದರಿಂದ ಇನ್ನೆಷ್ಟು ಅನಾಹುತಗಳು ಆಗುತ್ತವೆಯೋ ಎನ್ನುವ ಚಿಂತೆ ರಾಜ್ಯದ ಜನರದ್ದಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದಲೂ ಬಿಸಿಲಿನ ವಾತಾವರಣವೇ ಮುಂದುವರೆದಿತ್ತು. ಹಾಗೆಯೇ ಮಂಗಳವಾರ ಬೆಳಗ್ಗೆಯಿಂದಲೂ ಕೂಡ ಬಿಸಿಲು ಇದ್ದು, ಮಧ್ಯಾಹ್ನದ ವೇಳೆಗೆ ಇದ್ದಕ್ಕಿದ್ದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಮಳೆರಾಯ ಆರ್ಭಟವನ್ನು ಶುರು ಮಾಡಿದ್ದಾನೆ.