ಬ್ರಿಜ್ ಭೂಷಣ್ ವಿರುದ್ಧ 2 FIR, 10 ದೂರು

ದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌ (WFI) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ (Brij Bhushan Sharan Singh) ವಿರುದ್ಧ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳ ಆಧಾರದ ಮೇಲೆ ದೆಹಲಿ ಪೊಲೀಸರು 2 ಎಫ್‌ಐಆರ್‌ ಮತ್ತು 10 ದೂರುಗಳನ್ನ ದಾಖಲಿಸಿದ್ದಾರೆ.

 

ಡಯಟೀಷಿಯನ್ ಅಥವಾ ಕೋಚ್ ಅನುಮೋದನೆ ನೀಡದ ಅಪರಿಚಿತ ಖಾದ್ಯವನ್ನು ತಿನ್ನಲು ನೀಡಿದ್ದರು, ಅಪ್ರಾಪ್ತ ವಯಸ್ಸಿನ ಆಟಗಾರ್ತಿಯ ಎದೆ ಸುತ್ತಲೂ ಕೈಗಳನ್ನು ಆಡಿಸಿದ್ದರು ಮತ್ತು ಆಕೆಯನ್ನು ದುರುಗುಟ್ಟಿ ನೋಡುತ್ತಿದ್ದರು ಎಂದು ಕೂಡ ಎಫ್‌ಐಆರ್ ಹೇಳಿದೆ. ಕಳೆದ ಏಪ್ರಿಲ್ 21ರಂದು ದಿಲ್ಲಿಯ ಕನ್ನೌಟ್ ಪ್ಲೇಸ್ ಪೊಲೀಸ್ ಠಾಣೆಗೆ ಆರು ಮಂದಿ ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನ ಆಧಾರದಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ತಂದೆ ಕೂಡ ಏಪ್ರಿಲ್ 28ರಂದು ಪ್ರತ್ಯೇಕ ದೂರು ನೀಡಿದ್ದು, ಎರಡೂ ಎಫ್‌ಐಆರ್‌ಗಳಿಂದ ಒಟ್ಟು ಏಳು ಕುಸ್ತಿಪಟುಗಳ ಆರೋಪ ದಾಖಲಾಗಿದೆ.

ಲೈಂಗಿಕ ದುರ್ವರ್ತನೆ ಆರೋಪಗಳನ್ನು ಬ್ರಿಜ್ ಭೂಷಣ್ ಅಲ್ಲಗಳೆದಿದ್ದಾರೆ. ಎಲ್ಲ ಆರೋಪಗಳೂ ಶುದ್ಧ ಸುಳ್ಳು ಎಂದು ಅವರು ಬುಧವಾರ ಹೇಳಿಕೆ ನೀಡಿದ್ದರು. “ನನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೂ ನನ್ನನ್ನು ನಾನು ನೇಣಿಗೆ ಒಡ್ಡಿಕೊಳ್ಳುತ್ತೇನೆ. ನಿಮ್ಮ ಬಳಿ (ಕುಸ್ತಿಪಟುಗಳು) ಯಾವುದೇ ಪುರಾವೆ ಇದ್ದರೂ ಅದನ್ನು ಕೋರ್ಟ್‌ ಮುಂದೆ ಹಾಜರುಪಡಿಸಿ. ನಾನು ಯಾವುದೇ ಶಿಕ್ಷೆ ಎದುರಿಸಲೂ ಸಿದ್ಧ” ಎಂದು ಅವರು ಹೇಳಿದ್ದರು.

ಎರಡೂ ಎಫ್‌ಐಆರ್‌ಗಳು ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಅನುಚಿತ ವರ್ತನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿ ಪ್ರಕರಣಗಳನ್ನು ನಮೂದಿಸಿವೆ. ಇವು ಒಂದರಿಂದ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಬಲ್ಲವು.

Loading

Leave a Reply

Your email address will not be published. Required fields are marked *